​ಕಾಬೂಲ್‌ನಲ್ಲಿ ಬಾಂಬ್‌ ದಾಳಿ; 80ಕ್ಕೂ ಅಧಿಕ ಸಾವು

Update: 2017-05-31 14:04 GMT

ಕಾಬೂಲ್, ಮೇ 31: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅತ್ಯಂತ ಸುರಕ್ಷಿತ ಪ್ರದೇಶವಾಗಿರುವ ರಾಜತಾಂತ್ರಿಕ ವಲಯದಲ್ಲಿ ಬುಧವಾರ ಪ್ರಬಲ ಬಾಂಬೊಂದು ಸ್ಫೋಟಿಸಿದ್ದು ಕನಿಷ್ಠ 80 ಮಂದಿ ಮೃತಪಟ್ಟಿದ್ದಾರೆ ಹಾಗೂ 350ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಆತ್ಮಹತ್ಯಾ ಬಾಂಬರೊಬ್ಬ ಝಾನ್‌ಬಾಗ್ ಚೌಕದಲ್ಲಿ ಬೆಳಗ್ಗೆ ಸುಮಾರು 8:30ಕ್ಕೆ ಸ್ಫೋಟಕಗಳಿಂದ ತುಂಬಿದ್ದ ವಾಹನವೊಂದನ್ನು ಸ್ಫೋಟಿಸಿದನು ಎಂದು ಆಂತರಿಕ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘50ಕ್ಕೂ ಅಧಿಕ ವಾಹನಗಳು ಸಂಪೂರ್ಣವಾಗಿ ನಾಶವಾಗಿವೆ ಅಥವಾ ಹಾನಿಗೀಡಾಗಿವೆ’’ ಎಂದಿದೆ.

ಪ್ರಬಲ ಬಾಂಬ್ ಸ್ಫೋಟದಲ್ಲಿ ಕಾಬೂಲ್‌ನಲ್ಲಿರುವ ಜರ್ಮನ್ ರಾಯಭಾರ ಕಚೇರಿಯ ಉದ್ಯೋಗಿಗಳು ಗಾಯಗೊಂಡಿದ್ದಾರೆ ಹಾಗೂ ಓರ್ವ ಅಫ್ಘಾನ್ ಭದ್ರತ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಜರ್ಮನ್ ವಿದೇಶ ಸಚಿವ ಸಿಗ್ಮರ್ ಗ್ಯಾಬ್ರಿಯಲ್ ‘ಟ್ವಿಟರ್’ನಲ್ಲಿ ಹೇಳಿದ್ದಾರೆ.

‘‘ಜರ್ಮನ್ ರಾಯಭಾರ ಕಚೇರಿಯ ಅತಿ ಸಮೀಪದಲ್ಲೇ ಸ್ಫೋಟ ನಡೆದಿದೆ. ಸ್ಫೋಟದಲ್ಲಿ ನಾಗರಿಕರು ಹಾಗೂ ಅಫ್ಘಾನಿಸ್ತಾನದ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡಲೆಂದು ಅಲ್ಲಿಗೆ ಹೋಗಿರುವ ಜರ್ಮನಿಗರು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಈ ಜನರನ್ನು ಗುರಿಯಾಗಿಸಿ ನಡೆದ ದಾಳಿ ಖಂಡನೀಯ’’ ಎಂದು ಗ್ಯಾಬ್ರಿಯಲ್ ನುಡಿದರು.

ಸ್ಫೋಟ ನಡೆದ ಸ್ಥಳದಲ್ಲಿ ಮೃತದೇಹಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ದಟ್ಟ ಹೊಗೆ ಪರಿಸರವನ್ನು ಆವರಿಸಿತು.

ನೂರಾರು ಮೀಟರ್ ದೂರದ ಮನೆಗಳ ಬಾಗಿಲುಗಳು ಮತ್ತು ಕಿಟಿಕಿಗಳು ಕಿತ್ತು ಹೊರಹಾರಿವೆ.

ಭಾರತೀಯ ರಾಯಭಾರ ಕಚೇರಿ ಸಮೀಪವೇ ಸ್ಫೋಟ

ಸ್ಫೋಟ ನಡೆದ ಸ್ಥಳದ ಸಮೀಪದಲ್ಲೇ ಭಾರತೀಯ ರಾಯಭಾರ ಕಚೇರಿಯೂ ಇದೆ. ‘‘ದೇವರ ದಯೆಯಿಂದ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’’ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಭಾರತೀಯ ರಾಯಭಾರ ಕಚೇರಿಯು ಸ್ಫೋಟ ನಡೆದ ಸ್ಥಳದಿಂದ ಕೆಲವು ನೂರು ಮೀಟರ್ ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News