ನಿಮಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ರ ಮೊಬೈಲ್ ನಂಬರ್ ಬೇಕಾ ?
ವಾಷಿಂಗ್ಟನ್,ಮೇ 31 : ವಿಶ್ವ ನಾಯಕರಿಗೆ ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನೀಡಿ ತಮಗೆ ನೇರವಾಗಿ ಕರೆ ಮಾಡುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿರುವುದು ಭದ್ರತಾ ಸಂಸ್ಥೆಗಳಿಗೆ ದೊಡ್ಡ ತಲೆನೋವಿನ ವಿಚಾರವಾಗಿ ಪರಿಣಮಿಸಿದ್ದು ಅಧ್ಯಕ್ಷರು ಅನೇಕ ದೇಶಗಳ ನಾಯಕರುಗಳೊಂದಿಗೆ ಯಾವುದೇ ಪೂರ್ವ ತಯಾರಿಯಿಲ್ಲದೆ ನೇರವಾಗಿ ಮಾತನಾಡಿದರೆ ಆಗುವ ಪರಿಣಾಮಗಳ ಬಗ್ಗೆ ಸಾಕಷ್ಟು ಕಳವಳ ಸೃಷ್ಟಿಯಾಗಿದೆ.
ಈಗಾಗಲೇ ಟ್ರಂಪ್ ಅವರು ಕೆನಡಾ ಮತ್ತು ಮೆಕ್ಸಿಕೋದ ನಾಯಕರಿಗೆ ತಮ್ಮನ್ನು ತಮ್ಮ ಸೆಲ್ ಫೋನ್ ಮುಖಾಂತರ ಸಂಪರ್ಕಿಸಲು ಹೇಳಿದ್ದಾರೆಂದು ಅಧಿಕಾರಿಗಳು ಹೇಳಿದ್ದು ಈ ಸೌಲಭ್ಯದ ಪ್ರಯೋಜನವನ್ನು ಇಲ್ಲಿಯವರೆಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡಿಯೋ ಪಡೆದಿದ್ದಾರೆಂದು ಹೇಳಲಾಗಿದೆ. ಟ್ರಂಪ್ ಹಾಗೂ ಫ್ರೆಂಚ್ ಅಧ್ಯಕ್ಷ ಇಮಾನ್ಯುವೆಲ್ ಮಾಕ್ರನ್ ಕೂಡ ತಮ್ಮ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದು ಫ್ರೆಂಚ್ ಅಧ್ಯಕ್ಷರು ಅಮೆರಿಕದ ಅಧ್ಯಕ್ಷರಿಗೆ ನೇರವಾಗಿ ಕರೆ ಮಾಡಲಿದ್ದಾರೆಯೇ ಎಂಬುದು ತಿಳಿಯದಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಈ ಆಧುನಿಕ ಮೊಬೈಲ್ ಯುಗದಲ್ಲಿ ಅದು ಕೂಡ ದೊಡ್ಡ ಮಟ್ಟದ ರಾಷ್ಟ್ರ ನಾಯಕರ ಕರೆಗಳು ಹಾಗೂ ಅವರು ಮಾತನಾಡುವ ವಿಚಾರಗಳು ಪೂರ್ವನಿರ್ಧರಿತವಾಗಿರುವುದರಿಂದ ಇಂತಹ ನೇರ ಸಂಭಾಷಣೆಗಳಲ್ಲಿ ಪ್ರೊಟೋಕಾಲ್ ಉಲ್ಲಂಘನೆಗಳು ನಡೆಯವ ಸಂಭವವೂ ಇದೆ ಎಂದು ಅಧಿಕಾರಿಗಳು ಭಯಪಡುತ್ತಾರೆ.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೂ ಟ್ರಂಪ್ ಅವರು ಮೊಬೈಲ್ ಫೋನಿನ ಮುಖಾಂತರ ಎಲ್ಲರಿಗೂ ಸಂಪರ್ಕಕ್ಕೆ ಲಭ್ಯರಿದ್ದ ಕಾರಣ ಅವರು ಅಧ್ಯಕ್ಷರಾದ ನಂತರವೂ ತಮ್ಮ ಹಳೆ ಅಭ್ಯಾಸ ಬಿಟ್ಟಿಲ್ಲವೆನ್ನಲಾಗಿದೆ.
ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ಹೊಂದಿದವರು ಹಿಂದಿನಿಂದಲೂ ಸುರಕ್ಷಿತ ಫೋನ್ ಲೈನ್ ಗಳ ಮುಖಾಂತರ ಶ್ವೇತಭವನದಿಂದ, ಓವಲ್ ಆಫೀಸ್ ಅಥವಾ ಅಧ್ಯಕ್ಷೀಯ ಲಿಮೋಸೀನ್ ವಾಹನದಿಂದ ಕರೆ ಮಾಡುವುದು ನಿಯಮವಾಗಿದೆ. ಆದರೆ ಟ್ರಂಪ್ ಅವರು ತಮಗೆ ಸರಕಾರ ನೀಡಿದ ಸೆಲ್ ಫೋನಿನ ಮುಖಾಂತರ ಕರೆ ಮಾಡಿದರೂ ವಿದೇಶಿ ಸರಕಾರಗಳಿಂದ ಕದ್ದಾಲಿಕೆಯಾಗುವ ಅಪಾಯ ಇದ್ದೇ ಇರುತ್ತದೆ ಎಂದು ಭದ್ರತಾ ತಜ್ಞರು ಹೇಳುತ್ತಾರೆ.
ವಿಶ್ವ ನಾಯಕರ ಜತೆ ಅಧ್ಯಕ್ಷರು ನಡೆಸುವ ಅನೌಪಚಾರಿಕ ಕರೆಗಳ ಬಗ್ಗೆ ದಾಖಲೆಗಳನ್ನಿಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಶ್ವೇತ ಭವನದ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.