ಎಲ್‌ಕೆಜಿ-ಯುಕೆಜಿ ರದ್ದುಗೊಳಿಸಲು ಆದೇಶ: ಬೆಂಗರೆ ಕಸಬಾ ಸರಕಾರಿ ಶಾಲಾ ವಿದ್ಯಾರ್ಥಿಗಳು-ಹೆತ್ತವರ ಧರಣಿ

Update: 2017-05-31 09:19 GMT

ಮಂಗಳೂರು, ಮೇ 31: ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ರದ್ದುಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅತಂತ್ರರಾಗಿರುವ ಬೆಂಗರೆ ಕಸಬಾದ ಸರಕಾರಿ ಹಿ.ಪ್ರಾ. ಶಾಲೆಯ ಆಂಗ್ಲಮಾಧ್ಯಮದ 300 ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಬುಧವಾರ ಮುಖ್ಯ ಶಿಕ್ಷಕರ ಕಚೇರಿ ಮುಂದೆ ಧರಣಿ ನಡೆಸಿದರು.

ಡಿವೈಎಫ್‌ಐ ಬೆಂಗರೆ ಘಟಕದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, ಹೆತ್ತವರು ಸರಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿದರು. ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ವಲಯ ಶಿಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಒತ್ತಾಯಿಸಿದರು.

ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ಬಿಇಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳ ಹೆತ್ತವರು ‘ಸ್ವತ: ನಾವೇ ಹಣ ಸಂಗ್ರಹಿಸಿ ನಮ್ಮ ಮಕ್ಕಳಿಗೆ ಆಂಗ್ಲಮಾಧ್ಯಮ ತರಗತಿಗಳನ್ನು ನಡೆಸುತ್ತಿದ್ದರೂ ಅದಕ್ಕೆ ತಾವು ಅವಕಾಶ ನೀಡದಿರುವುದು ಖಂಡನೀಯ. ಖಾಸಗಿ ಸಂಸ್ಥೆಗಳು ಕನ್ನಡ ಮಾಧ್ಯಮ ತರಗತಿಗಾಗಿ ಅನುಮತಿ ಪಡೆದು ಬಳಿಕ ಆಂಗ್ಲಮಾಧ್ಯಮ ತರಗತಿಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಜರಗಿಸದ ತಾವು ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರೇ ಅಧಿಕ ಸಂಖ್ಯೆಯಲ್ಲಿರುವ ಕಸಬಾ ಬೆಂಗರೆಯ ಶಾಲೆಯ ಮೇಲೆ ಕಣ್ಣು ಹಾಯಿಸಿರುವುದು ಸರಿಯಲ್ಲ’ ಎಂದು ಹರಿಹಾಯ್ದರು.

ಸೋಮವಾರದಿಂದ ಶಾಲೆ ಪುನರಾರಂಭಗೊಂಡಿದ್ದರೂ ಶಿಕ್ಷಕಿಯರು ಆಂಗ್ಲಮಾಧ್ಯಮದ ತರಗತಿ ನಡೆಸಲು ಹಿಂದೇಟು ಹಾಕುತ್ತಿದ್ದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಎರಡು ದಿನ ಕಾದ ಬಳಿಕ ಬುಧವಾರ ಶಾಲೆಯ ಮುಖ್ಯ ಶಿಕ್ಷಕಿಯ ಕಚೇರಿ ಮುಂದೆ ಧರಣಿ ನಡೆಸಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು. 

ಧರಣಿಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡ ಬಿ.ಕೆ.ಇಮ್ತಿಯಾಝ್, ಬೆಂಗರೆ ಘಟಕದ ಮುಖಂಡರಾದ ಎ.ಬಿ.ನೌಶಾದ್, ರಿಯಾಝ್ ಬೆಂಗರೆ, ಯಹ್ಯಾ ಬೆಂಗರೆ, ಎಸ್‌ಎಫ್‌ಐ ಜಿಲ್ಲಾ ಮುಖಂಡ ಹಂಝ ಕಿನ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಕೈರುನ್ನಿಸಾ, ಸದಸ್ಯರಾದ ರಫೀಕ್ ಪಿ.ಜಿ., ನಾಸಿರ್, ತೌಸೀಫ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News