ವಿಟಿಯು ನಿರ್ಲಕ್ಷ್ಯದ ವಿರುದ್ಧ ಜಿಲ್ಲಾಧಿಕಾರಿಗೆ ಎಸ್‌ಐಒ ಮನವಿ

Update: 2017-05-31 09:34 GMT

ಮಂಗಳೂರು, ಮೇ 31: ರಾಜ್ಯಾದ್ಯಂತ 200ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಒಳಗೊಂಡಿರುವ ಹಾಗೂ ರಾಜ್ಯದ ಒಂದು ಪ್ರಮುಖ ವಿಶ್ವವಿದ್ಯಾನಿಲಯ ಎಂದು ಗುರುತಿಸಲ್ಪಟ್ಟಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ನಿರ್ಲಕ್ಷ್ಯತೆಯನ್ನು ಖಂಡಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ) ದ.ಕ.ಜಿಲ್ಲಾ ಘಟಕದ ನಿಯೋಗವು ದ.ಕ.ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್‌ರಿಗೆ ಬುಧವಾರ ಮನವಿ ಸಲ್ಲಿಸಿತು.

ವಿಟಿಯು ಇಂದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವುದು ಖಂಡನೀಯ. ಕಳೆದ ಸೆಮಿಸ್ಟರ್‌ನ ಫಲಿತಾಂಶಗಳ ವಿಳಂಬವೇ ಇದಕ್ಕೆ ಸಾಕ್ಷಿ. ಫೆಬ್ರವರಿಯಲ್ಲಿ ಬರಬೇಕಾದ ಫಲಿತಾಂಶಗಳು ಮೂರು ತಿಂಗಳ ಬಳಿಕ ಬಂದಿವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆಗಳನ್ನು ಎದುರಿಸಬೇಕೋ ಅಥವಾ ಮೌಲ್ಯ ಮಾಪನಕ್ಕಾಗಿ ನಿರೀಕ್ಷಿಸಬೇಕೋ ಎಂಬ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕರಿಸಿದ್ದಪ್ಪ ಕ್ರ್ಯಾಶ್ ಕೋರ್ಸ್‌ನ್ನು ಪ್ರಾರಂಭಿಸಿದ್ದರಿಂದ ಮೌಲ್ಯಮಾಪಕರ ಕೊರತೆ ಉಂಟಾಗಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಬದಲಾವಣೆ ಮತ್ತು ಉತ್ತರ ಪತ್ರಿಕೆಗಳಲ್ಲಿ ಬಾರ್ ಕೋಡ್ ವ್ಯವಸ್ಥೆ ಅಳವಡಿಸಿದ್ದಾರೆ. ಇದರಿಂದ ಫಲಿತಾಂಶಗಳನ್ನು ಪ್ರಕಟಿಸುವಲ್ಲಿ ವಿಳಂಬವಾಗಿದೆ. ವಿಟಿಯು ತನ್ನ ತಾಂತ್ರಿಕ ದೋಷಗಳನ್ನು ಪೂರ್ವದಲ್ಲೇ ಬಗೆಹರಿಸಿಕೊಳ್ಳಬೇಕಿತ್ತು ಎಂದು ಎಸ್‌ಐಒ ಅಭಿಪ್ರಾಯಪಟ್ಟಿದೆ.

ಮುಂದಿನ ಸೆಮಿಸ್ಟರ್ ಪರೀಕ್ಷೆಗಳ ಮುನ್ನ ಪದವಿಯ ಮರುಮೌಲ್ಯಮಾಪನ ಫಲಿತಾಂಶ ಪ್ರಕಟಿಸಬೇಕು. 550 ರೂ.ಇದ್ದ ಪದವಿ ಪರೀಕ್ಷಾ ಶುಲ್ಕವನ್ನು 1200 ರೂ.ಗೆ, ಸ್ನಾತಕೋತ್ತರ ಪರೀಕ್ಷಾ ಶುಲ್ಕವನ್ನು 1050 ರೂ.ನಿಂದ 1500 ರೂ.ಗೆ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಮರು ಮೌಲ್ಯಮಾಪನ ಶುಲ್ಕವನ್ನು 3,000 ರೂ.ಗೆ ಏರಿಸುವ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು. ಸ್ನಾತಕೋತ್ತರ ಪದವಿ ಪರೀಕ್ಷೆಗಳು ಡಿಸೆಂಬರ್‌ನಲ್ಲಿ ಮುಗಿದು 5 ತಿಂಗಳು ಕಳೆದರೂ ಫಲಿತಾಂಶ ಇನ್ನು ಬರದಿರುವುದರಿಂದ ಜೂ.14 ಮತ್ತು 28ರಂದು ಸೆಮಿಸ್ಟರ್ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಾಗಿದೆ. ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. 2015-2016ರಲ್ಲಿ ಪಿಎಚ್‌ಡಿಯಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳ ಕೋರ್ಸ್ ವರ್ಕ್ ಒಂದೂವರೆ ವರ್ಷದ ನಂತರ ಅಂದರೆ 2017ರ ಫೆಬ್ರವರಿಯಲ್ಲಿ ಆರಂಭಗೊಂಡಿದೆ. ಇನ್ನು 2016-2017ರಲ್ಲೂ ಪ್ರವೇಶ ಪಡೆದ ವಿದ್ಯಾರ್ಥಿಗಳ ಕೋರ್ಸ್ ವರ್ಕ್ ಅನ್ನು ಆರಂಭಗೊಳ್ಳದಿರುವುದು ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ. ಆದ್ದರಿಂದ ಪಿಎಚ್‌ಡಿ ದಾಖಲಾತಿ ಪ್ರಕ್ರಿಯೆಯನ್ನು ನಿರ್ದಿಷ್ಟ ಸಮಯದಲ್ಲಿ ಮುಕ್ತಾಯ ಮಾಡಬೇಕು. ಸಿಬಿಸಿಎಸ್ ನ ಕ್ಲಾಝ್ 150ಬಿ, 7 ಅನ್ನು ಅನುಷ್ಠಾನಗೊಳಿಸಬೇಕು ಎಂದು ಎಸ್‌ಐಒ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ಎಸ್‌ಐಒ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ತಲ್ಹಾ ಇಸ್ಮಾಯೀಲ್, ಮಂಗಳೂರು ನಗರಾಧ್ಯಕ್ಷ ಮುಬೀನ್ ಬೆಂಗ್ರೆ ಮತ್ತು ಡಾ.ಮಿಸಬ್ ಬೆಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News