ಸೊರಕೆಯವರಿಂದ ಆದ ಅಭಿವೃದ್ಧಿ ಬಿಜೆಪಿ ಶಾಸಕರಿಂದ ಆಗಲಿಲ್ಲ: ವಿಶ್ವಾಸ್ ಅಮೀನ್
ಕಾಪು, ಮೇ 31: ಕಳೆದ 10 ವರ್ಷಗಳಲ್ಲಿ ಬಿಜೆಪಿ ಶಾಸಕರಿಂದ ಆಗದ ಕಾಪು ಕ್ಷೇತ್ರದ ಅಭಿವೃದ್ಧಿಗಳು ಕೇವಲ ನಾಲ್ಕು ವರ್ಷಗಳಲ್ಲಿ ಶಾಸಕ ವಿನಯ ಕುಮಾರ್ ಸೊರಕೆಯವರು ಮಾಡಿದ್ದಾರೆ. ಜನ ಮರೆಯಲಾಗದ ಸಾಧನೆಗಳನ್ನು ಕಂಡು ಹತಾಶರಾಗಿ ಬಿಜೆಪಿ ನಾಯಕರು ಕೈಯಲ್ಲಾಗದವ ಮೈಯೆಲ್ಲಾ ಪರಚಿದಂತೆ ಹೇಳಿಕೆ ನೀಡುವ ಮೂಲಕ ಪ್ರಜ್ಞಾವಂತ ನಾಗರಿಕರಿಗೆ ದ್ರೋಹ ಮಾಡುತಿದ್ದಾರೆ ಎಂದು ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಆರೋಪಿಸಿದರು.
ಅವರು ಬುಧವಾರ ಕಾಪು ರಾಜೀವ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 10 ವರ್ಷಗಳ ಅವಧಿಯಲ್ಲಿ ಬಿಜೆಪಿ ಶಾಸಕರು ಯುವ ಪೀಳಿಗೆಗೆ ಆದರ್ಶವಾಗುವ, ಶಾಶ್ವತವಾದ ಯಾವ ಯೋಜನೆಯನ್ನು ಅನುಷ್ಠಾನ ಮಾಡಿದ್ದಾರೆ ?. ಕಾಪು ಪುರಸಭೆ, ಕಾಪು ತಾಲ್ಲೂಕು, ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ಪಾರ್ಕ್ ಅಲ್ಲದೆ ಹಲವು ದಶಕಗಳ ಬೇಡಿಕೆಯಾದ ಜಾರುಕುದ್ರು, ಅವರಾಲು ಮಟ್ಟು ಸೇತುವೆ, ಕ್ಷೇತ್ರಾದಾದ್ಯಂತ ಸಂಪರ್ಕ ರಸ್ತೆಗಳ ನಿರ್ಮಾಣ ಬಿಜೆಪಿ ನಾಯಕರ ಪ್ರಯತ್ನದ ಫಲವೇ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಆಡಳಿತದಲ್ಲಿದ್ದಾಗ ಅರಾಜಕತೆ ಎದ್ದು ಕಾಣುತಿತ್ತು. ರಾಜ್ಯದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತ 18 ಬಿಜೆಪಿ ಸಚಿವರ ಭ್ರಷ್ಠಾಚಾರದ ಮೂಲಕ ಜೈಲು ಪಾಲಾಗಿದ್ದಾರೆ. ಈ ಮೂಲಕ ರಾಜ್ಯದ ಮಾನ ಹರಾಜು ಮಾಡಿದ್ದಾರೆ. ಇದನ್ನು ಎಂದಿಗೂ ಜನ ಮರೆತಿಲ್ಲ. ಈಗ ಅದೇ ಮುಖ ಅದೇ ಮನಸ್ಸು ವೇಷ ಮಾತ್ರ ಬದಲಾಯಿಸಿದ್ದಾರೆ ಎಂದು ಲೇವಡಿ ಮಾಡಿದರು.
ಈ ಹಿಂದೆ ಕಾಪುವಿನಲ್ಲಿ 10 ವರ್ಷಗಳ ಕಾಲ ಶಾಸಕರಾಗಿದ್ದ ಲಾಲಾಜಿ ಮೆಂಡನ್ ಅವರನ್ನು ಜನರು ಹುಡುಕಿಕೊಂಡು ಹೋಗ ಬೇಕಿತ್ತು. ಆದರೆ ಇದೀಗ ಶಾಸಕರೇ ಜನರ ಬಳಿಗೆ ಅಧಿಕಾರಿಗಳೊಂದಿಗೆ ತೆರಳಿ ಜನರ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹಾರ ಕೊಡಿಸುವಂತೆ ಮಾಡುತ್ತಿದ್ದಾರೆ. ಈ ಮೂಲಕ ಸೊರಕೆಯವರು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹೊಸ ಸ್ವರೂಪ ನೀಡಿದ್ದಾರೆ. ಇದನ್ನು ಬಿಜೆಪಿಯವರು ತಿಳಿಯಲಿ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರು ಪ್ರಚಾರಪ್ರಿಯರಲ್ಲ, ಪತ್ರಿಕಾ ಹೇಳಿಕೆ ನೀಡುವುದು, ಜನರಿಗೆ ಈಡೇರಿಸಲಾಗದ ಆಸೆ ತೋರಿಸಿ ಮೋಸ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಆದರೆ ಅದನ್ನು ನಿರಂತರವಾಗಿ ಮಾಡಿದಾಗ ಜನರೇ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕಾಪು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹೆಜಮಾಡಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮುಹಮ್ಮದ್ ಇಮ್ರಾನ್, ಕಾಪು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ, ಕಾರ್ಯದರ್ಶಿಗಳಾದ ಸಂತೋಷ್ ಬಂಗೇರ, ತನುಜ್ ಕರ್ಕೇರ, ಮಹಮ್ಮದ್ ನಿಯಾಝ್ ಇದ್ದರು.
ಸಂಸದೆಯನ್ನು ಹುಡುಕಿಕೊಡಿ: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಡುವವರು ಯಾರು ?, ಸಂಸದೆಯಾದ ಬಳಿಕ ಲೋಕಸಭಾ ಕ್ಷೇತ್ರದಲ್ಲಿ ತಿರುಗಾಡುವುದು ವಿರಳವಾಗಿದೆ. ಅಲ್ಲದೆ ಅವರಿಗೆ ಕಾಪು ಕ್ಷೇತ್ರದ ಮೇಲೆ ಕಾಳಜಿ ಇಲ್ಲ. ಅವರು ಈವರೆಗೆ ಕ್ಷೇತ್ರದ ಗ್ರಾಪಂಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ. ಅವರು ಕಾಪು ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು? ಎಂದು ಪ್ರಶ್ನಿಸಿದ ವಿಶ್ವಾಸ್ ಅಮೀನ್, ಜನಸಾಮಾನ್ಯರ ಸಮಸ್ಯೆಯನ್ನು ಯಾರ ಬಳಿ ಹೇಳಲಿ. ಅವರನ್ನು ಎಲ್ಲಿ ಹುಡುಕಲಿ ಎಂದು ಅವರು ಲೇವಡಿ ಮಾಡಿದರು.