ಲಂಕಾ:ಭೀಕರ ಪ್ರವಾಹದಲ್ಲಿ ಮೃತರ ಸಂಖ್ಯೆ 202ಕ್ಕೆ ಏರಿಕೆ; 96 ಮಂದಿ ನಾಪತ್ತೆ
ಕೊಲಂಬೊ, ಮೇ 31: ಮುಂಗಾರು ಮಳೆ ಸೃಷ್ಟಿಸಿರುವ ಭೀಕರ ಪ್ರವಾಹದಿಂದ ಜರ್ಝರಿತವಾಗಿರುವ ಶ್ರೀಲಂಕಾಗೆ ಬುಧವಾರ ಅಂತಾರಾಷ್ಟ್ರೀಯ ನೆರವು ಆಗಮಿಸಿದೆ.
ಅದೇ ವೇಳೆ, ದಶಕಕ್ಕೂ ಹೆಚ್ಚು ಅವಧಿಯ ಬಳಿಕ ದೇಶಕ್ಕೆ ಅಪ್ಪಳಿಸಿರುವ ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರ ಸಂಖ್ಯೆ 202ಕ್ಕೆ ಏರಿದೆ ಹಾಗೂ 96 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ.
ಶುಕ್ರವಾರದ ಜಲಪ್ರಳಯದ ಬಳಿಕ ಸುಮಾರು 6 ಲಕ್ಷ ಮಂದಿ ನಿರ್ವಸಿತರಾಗಿದ್ದು ವಿವಿಧ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ನಿರ್ವಸಿತರಿಗೆ ನೆರವು ನೀಡುವುದಕ್ಕಾಗಿ 16 ದೇಶಗಳು ಪರಿಹಾರ ಸಾಮಗ್ರಿಗಳು ಮತ್ತು ಔಷಧಿಗಳನ್ನು ಕಳುಹಿಸಿಕೊಟ್ಟಿವೆ ಎಂದು ವಿದೇಶ ಸಚಿವ ರವಿ ಕರುಣನಾಯಕೆ ಹೇಳಿದರು.
‘‘ನಮ್ಮ ತಕ್ಷಣದ ಅಗತ್ಯಗಳೇನು ಎಂಬ ಬಗ್ಗೆ ಇತರ ದೇಶಗಳು ಮತ್ತು ಸಂಸ್ಥೆಗಳೂ ವಿಚಾರಿಸುತ್ತಿವೆ. ಈ ರೀತಿಯ ಪ್ರತಿಕ್ರಿಯೆಯಿಂದ ನಮ್ಮ ಹೃದಯ ತುಂಬಿ ಬಂದಿದೆ’’ ಎಂದು ಕೊಲಂಬೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರುಣನಾಯಕೆ ಹೇಳಿದರು.
ಭಾರತ ಮತ್ತು ಪಾಕಿಸ್ತಾನಗಳೂ ಅತಿ ಹೆಚ್ಚು ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಿವೆ.
ಹೆಚ್ಚಿನ ಸ್ಥಳಗಳಲ್ಲಿ ಪ್ರವಾಹ ಇಳಿದಿದ್ದು, ನೂರಾರು ಸ್ವಯಂಸೇವಕರು ಕುಡಿಯುವ ನೀರಿನ ಬಾವಿಗಳ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ನೀರಿನಿಂದ ಹರಡುವ ರೋಗಗಳನ್ನು ತಡೆಯಲು ಹೆಚ್ಚುವರಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗುತ್ತಿದೆ ಎಂದು ಸರಕಾರಿ ವಕ್ತಾರ ರಜಿತಾ ಸೇನಾರತ್ನೆ ತಿಳಿಸಿದರು.
2003ರ ಮೇ ತಿಂಗಳಿನಲ್ಲೂ ಇದೇ ತೀವ್ರತೆಯ ಮಳೆ ಮತ್ತು ಪ್ರವಾಹ ಸಂಭವಿಸಿದ್ದು ಸುಮಾರು 250 ಮಂದಿ ಮೃತಪಟ್ಟಿದ್ದರು ಹಾಗೂ 10,000ಕ್ಕೂ ಅಧಿಕ ಮನೆಗಳು ನಾಶಗೊಂಡಿದ್ದವು.