ಶಿಕ್ಷಕರ ಹಾಜರಾತಿಗೆ ‘ಪಂಚಿಂಗ್’ ವ್ಯವಸ್ಥೆ ಕಲ್ಪಿಸಿ: ಬಳಕೆದಾರರ ಹಿತರಕ್ಷಣಾ ವೇದಿಕೆ

Update: 2017-05-31 14:14 GMT

ಪುತ್ತೂರು, ಮೇ 31: ಸರ್ಕಾರಿ ಶಾಲೆಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಿ ಪಠ್ಯ ಮತ್ತು ಪಠ್ಯೇತರ ವಿಷಯಗಳ ನಿರ್ವಹಣೆ ಮಾಡುವಂತೆ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರ್ಪಡೆಗೊಳಿಸುವಂತೆ ಸಮಂಜಸ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರಿನ ಸರ್ವೆ ಬಳಕೆದಾರರ ಹಿತರಕ್ಷಣಾ ವೇದಿಕೆ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿದೆ.

 ಖಾಸಗಿ ಶಾಲೆಗಳಲ್ಲಿನ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಿ ಪಠ್ಯ ಮತ್ತು ಪಠ್ಯೇತರ ವಿಷಯಗಳ ಸಮರ್ಪಕ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೂ ಇದ್ದು, ಕೆಲವೊಂದು ಕಡೆಗಳಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಾರದೇ ಇರುವುದರಿಂದ ಮತ್ತು ಅವಧಿಗೆ ಮೊದಲೇ ತೆರಳುತ್ತಿರುವುದರಿಂದ ಸರಿಯಾಗಿ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಇದರಿಂದಾಗಿ ಪಠ್ಯ ವಿಷಯದಲ್ಲಿ ಏರು ಪೆರುಗಳಾಗುತ್ತಿದ್ದು, ಶಾಲೆಯ ಪ್ರಗತಿಗೆ ಮಾರಕವಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ಈ ಎಲ್ಲಾ ಸಮಸ್ಯೆಗಳ ಹಿನ್ನಲೆಯಲ್ಲಿ ಹೆತ್ತವರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರ್ಪಡೆಗೊಳಿಸುವ ಅನಿವಾರ್ಯತೆ ಬಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿಗಾಗಿ ‘ಪಂಚಿಂಗ್’ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿರುವ ಬಳಕೆದಾರರ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಬಾಲಚಂದ್ರ ಸೊರಕೆ ಅವರು ಎಲ್ಲಾ ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಳಿಸಿದಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಉಳಿಯಬಲ್ಲದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News