ಎಸ್‌ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾಗತಿಕ ಬೌದ್ಧಿಕ ಕಮ್ಮಟ
ಮಂಗಳೂರು, ಮೇ 31: ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ಪಿ ಕನ್ನಡ ಅಧ್ಯಯನ ಸಂಸ್ಥೆಯು ಭಾರತ ಸರಕಾರದ ಪ್ರತಿಷ್ಠಿತ ಜಾಗತಿಕ ಮಟ್ಟದ ಶೈಕ್ಷಣಿಕ ಜಾಲದ (ಗ್ಲೋಬಲ್ ಇನಿಯೇಟಿವ್ ಆನ್ ಎಕಡೆಮಿಕ್ ನೆಟ್‌ವರ್ಕ್ - ಗ್ಯಾನ್) ಕಾರ್ಯಕ್ರಮದ ಆಶ್ರಯದಲ್ಲಿ ಜೂ. 5ರಿಂದ 16ರವರೆಗೆ ‘ಬಹುಭಾಷಿಕತೆ: ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಆಯಾಮಗಳು’ ಎಂಬ ವಿಷಯದ ಕುರಿತು ಬೌದ್ಧಿಕ ಕಮ್ಮಟವನ್ನು ಆಯೋಜಿಸಲಾಗಿದೆ.
ಬಹುಭಾಷಿಕತೆ ಕುರಿತ ಇತ್ತೀಚಿನ ಸೈದ್ಧಾಂತಿಕ ಹಾಗೂ ಆನ್ವಯಿಕ ಸಂಶೋಧನೆಗಳನ್ನು, ಕರ್ನಾಟಕದಲ್ಲಿ ಬಹುಭಾಷಿಕತೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಸಂಶೋಧನಾ ವಿಧಾನಕ್ರಮಗಳನ್ನು ಚರ್ಚಿಸುವ ಉದ್ದೇಶದಿಂದ ಈ ವಿಶೇಷ ತರಗತಿಯನ್ನು ರೂಪಿಸಲಾಗಿದೆ.
ಮೂಲತಃ ಅಂತರ್ ಶಿಸ್ತೀಯ ಮತ್ತು ಬಹುಶಿಸ್ತೀಯ ನೆಲೆಯ ವಿಷಯ ಇದಾಗಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ನ್ಯೂಯಾರ್ಕ್‌ನ ಸ್ಟೋನಿ ಬ್ರೂಕ್ ವಿಶ್ವವಿದ್ಯಾನಿಲಯದಲ್ಲಿ ಭಾರತ ಅಧ್ಯಯನದ ನಿರ್ದೇಶಕರಾಗಿರುವ ಪ್ರಖ್ಯಾತ ಭಾಷಾವಿಜ್ಞಾನಿ ಪ್ರೊ. ಎಸ್.ಎನ್. ಶ್ರೀಧರ್ ಅವರು ಈ ಕಮ್ಮಟದ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
ಶೈಕ್ಷಣಿಕ ವಲಯದಲ್ಲಿ ತಮ್ಮ ಬರವಣಿಗೆ ಹಾಗೂ ಪಾಠ ಪ್ರವಚನಗಳಿಂದ ಪ್ರಸಿದ್ಧರಾಗಿರುವ ಪ್ರೊ. ಶ್ರೀಧರ್ ಈ ಬಹುಶಿಸ್ತೀಯ ಕಮ್ಮಟದಲ್ಲಿ, ಹೇಗೆ ಬಹುಬಾಷಿಕತೆ ತಮ್ಮ ತಂತ್ರದ ಮೂಲಕ ಭಾರತದ ಸಾಮಾಜಿಕ ವಲಯಗಳ ಮೇಲೆ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ತೋರಿಸಿಕೊಡುತ್ತಾರೆ. ಅಂತೆಯೇ, ಬಹುಭಾಷಿಕತೆಯ ಪ್ರಭಾವ ಹೇಗೆ ಸಾಂಸ್ಕೃತಿಕ ಅಧ್ಯಯನ, ಅಭಿವೃದ್ಧಿ ಅಧ್ಯಯನ, ಮಾಧ್ಯಮ ಅಧ್ಯಯನ, ಮಾನವಶಾಸ್ತ್ರ, ಸಮಾಜಶಾಸ್ತ್ರ, ನರಶಾಸ್ತ್ರ, ಸ್ಪೀಚ್ ಪೆಥಾಲಜಿ, ಭಾಷಾ ಬೋಧನೆ, ಚರಿತ್ರೆ, ಶಿಕ್ಷಣ, ರಾಜಕಾರಣ, ಕಾನೂನು, ಉದ್ಯಮ, ಜಾಹೀರಾತು, ಮನೋರಂಜನೆ ಮೊದಲಾದ ಶಿಸ್ತುಗಳ ಮೇಲೆ ಪ್ರಭಾವ ಬೀರುವ ರೀತಿಗಳನ್ನು ವಿವರಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ಕೆ. ಭೈರಪ್ಪ ಅಧ್ಯಕ್ಷತೆಯಲ್ಲಿ ಹಳೆಯ ಸೆನೆಟ್ ಹಾಲ್‌ನಲ್ಲಿ ಜೂ.5 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಬಿ ಎ.ವಿವೇಕ ರೈ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಕುಲಸಚಿವ ಪ್ರೊ. ಕೆ.ಎಂ. ಲೋಕೇಶ್ ಅವರು ಜೂ. 16ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಮಾರೋಪ ಸಮಾ ರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕಮ್ಮಟದಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳು, ಸಂಶೋಧನ ವಿದ್ಯಾರ್ಥಿಗಳು, ಅಧ್ಯಾಪಕರು, ಮತ್ತಿತರ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಆಸಕ್ತರು ಗ್ಯಾನ್ ಪೋರ್ಟ್‌ಲಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಈ ಕೆಳಗಿನಂತೆ ವಿಶ್ವವಿದ್ಯಾನಿಲಯದ ನೋಂದಾವಣೆ ಶುಲ್ಕವನ್ನು ಭರಿಸಿ ಕಮ್ಮಟದಲ್ಲಿ ಭಾಗವಸಬಹುದು.
ವಿದ್ಯಾರ್ಥಿಗಳು- ರೂ. 500, ಸಂಶೋಧನ ವಿದ್ಯಾರ್ಥಿಗಳು ರೂ. 1000, ಅಧ್ಯಾಪಕರು-ರೂ. 2000, ಕಂಪೆನಿಯ ಅಭ್ಯರ್ಥಿಗಳು ರೂ. 3000 ಶುಲ್ಕವನ್ನು ಭರಿಸಬೇಕು.
ಹೆಚ್ಚಿನ ವಿವರಗಳಿಗೆ ಪ್ರೊ. ಬಿ. ಶಿವರಾಮ ಶೆಟ್ಟಿ, (9448952011) ಕೋರ್ಸ್ ಸಂಯೋಜಕರು, ಎಸ್ ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ ಇವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.