×
Ad

ವರ್ಷದೊಳಗೆ 5 ಸುಸಜ್ಜಿತ ಬ್ ನಿಲ್ದಾಣ ನಿರ್ಮಾಣ: ಸಚಿವ ಪ್ರಮೋದ್

Update: 2017-05-31 20:51 IST

ಉಡುಪಿ, ಮೇ 31: ಒಂದು ವರ್ಷದೊಳಗೆ ಉಡುಪಿಯಲ್ಲಿ ಐದು ಹೈಟೆಕ್ ಹಾಗೂ ಸುಸಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಉಡುಪಿ -ಶಿವಮೊಗ್ಗ ಸರಕಾರಿ ಗ್ರಾಮಾಂತರ ಸಾರಿಗೆ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ನಗರದಲ್ಲಿ ನರ್ಮ್ ಬಸ್ ನಿಲ್ದಾಣ ನಿರ್ಮಾಣಕ್ಕೆ 4 ಕೋಟಿ ಬಿಡು ಗಡೆಯಾಗಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಬನ್ನಂಜೆಯಲ್ಲಿ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು 30 ಕೋಟಿ ರೂ. ಮಂಜೂರಾಗಿದ್ದು, ಇದನ್ನು ಕೆಎಸ್‌ಆರ್‌ಟಿಸಿಯವರೆ ನಿರ್ಮಿಸಲಿದ್ದಾರೆ. ಇದನ್ನು ಸಚಿವ ಸಂಪುಟದ ಒಪ್ಪಿಗೆಗೆ ಕಳುಹಿಸಲಾಗಿದೆ. ಡೆಲ್ಟಾ ಹಾಗೂ ನಗರೋತ್ಥಾನ ಯೋಜನೆಯ ಅನು ದಾನದಲ್ಲಿ ಉಡುಪಿ, ಮಲ್ಪೆ ಹಾಗೂ ಮಣಿಪಾಲಗಳಲ್ಲಿ ಹೈಟೆಕ್ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದರು.

ಈಗಾಗಲೇ 55 ನರ್ಮ್ ಬಸ್‌ಗಳಿಗೆ ಅನುಮತಿ ದೊರೆತಿದ್ದು, ಅದರಲ್ಲಿ 39 ಬಸ್‌ಗಳು ಈಗಾಗಲೇ ಓಡಾಟ ಆರಂಭಿಸಿವೆ. ಖಾಸಗಿ ಬಸ್‌ಗಳು ಇಲ್ಲದ ಪ್ರದೇಶ, ಖಾಸಗಿ ಬಸ್‌ಗಳಿಗೆ ಹೆಚ್ಚಿನ ಒತ್ತಡ ಹಾಗೂ ಜನರ ಬೇಡಿಕೆ ಇರುವ ಕಡೆಗಳಲ್ಲಿ ಉಳಿದ ಬಸ್‌ಗಳನ್ನು ಓಡಿಸಲಾಗುವುದು. ಈ ಕುರಿತು ಖಾಸಗಿ ಬಸ್ ಮಾಲಕರು ಯಾವುದೇ ಟೀಕೆ ಮಾಡಿದರೂ ಜನರು ನಮ್ಮ ಪರವಾಗಿ ಇದ್ದಾರೆ ಎಂದು ಅವರು ಹೇಳಿದರು.

ಇಂದಿನಿಂದ ಉಡುಪಿ ಆಗುಂಬೆ ಶಿವಮೊಗ್ಗ ಮಾರ್ಗವಾಗಿ 10 ಸರಕಾರಿ ಗ್ರಾಮಾಂತರ ಮಿನಿ ಬಸ್‌ಗಳು ಸೇವೆಯನ್ನು ಆರಂಭಿಸಲಿವೆ. ಈವರೆಗೆ ಈ ಮಾರ್ಗದಲ್ಲಿ ಯಾವುದೇ ಸರಕಾರಿ ಬಸ್‌ಗಳ ಸಂಚಾರ ಇರಲಿಲ್ಲ. ಈ 10 ಬಸ್‌ಗಳಿಗೆ ಉಡುಪಿಯಿಂದಲೇ ಪರವಾನಿಗೆ ನೀಡಲಾಗಿದೆ. ಇನ್ನು 20 ಬಸ್ ಗಳು ಉಡುಪಿಗೆ ಅಗತ್ಯವಿದ್ದು, 10 ಬಸ್‌ಗಳ ಕುಶನ್ ಕೆಲಸ ಹಾಗೂ 10 ಬಸ್‌ಗಳ ಬಾಡಿ ಬಿಲ್ಡಿಂಗ್ ಕೆಲಸ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರ ಅಧಿಕಾರಿ ಜೈಶಾಂತ್, ಡಿಪೋ ಮೆನೇಜರ್ ಉದಯ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯ ಅಧೀಕ್ಷಕ ಶಿವರಾಮ ನಾಯಕ್, ನಗರಸಭೆ ಸದಸ್ಯ ಜನಾರ್ದನ ಭಂಡಾರ್ಕರ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಮರಳು ಸಮಿತಿಯ ಸದಸ್ಯ ಕೇಶವ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಸಚಿವರು ಕೆಮ್ಮಣ್ಣು, ಬೇಂಗ್ರೆ, ಹೊನ್ನಾಳ, ಹಾರಾಡಿ, ಪೇತ್ರಿ ಪೇಟೆ, ಚೇರ್ಕಾಡಿ, ಕೊಕ್ಕರ್ಣೆ ಬಸ್ ನಿಲ್ದಾಣಗಳಲ್ಲಿ ಹೊಸ ನರ್ಮ್ ಬಸ್‌ಗಳಿಗೆ ಚಾಲನೆ ನೀಡಿದರು.

ಬಸ್‌ಗಳ ಸಮಯ
ಒಟ್ಟು 10 ಬಸ್‌ಗಳು ಉಡುಪಿಯಿಂದ ಬೆಳಗ್ಗೆ 6:30, 7, 7:30, 8, 8:30, 9, ಮಧ್ಯಾಹ್ನ 3, 3:30, 4, 5ಗಂಟೆಗೆ, ಶಿವಮೊಗ್ಗದಿಂದ ಬೆಳಗ್ಗೆ 5, 6, 7, 7:30, ಮಧ್ಯಾಹ್ನ 1, 1:30, 2, 3, 3:30, 4ಗಂಟೆಗೆ ಹೊರಡಲಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News