ಯಕ್ಷಗಾನ ಕಲಾವಿದರು ನಿಜವಾದ ಕಲಾ ಯೋಗಿಗಳು: ಪೇಜಾವರ ಶ್ರೀ
ಉಡುಪಿ, ಮೇ 31: ಯಕ್ಷಗಾನ ಕಲಾವಿದರು ತಮ್ಮ ಕಷ್ಟ ಸಂಕಷ್ಟಗಳನ್ನು ಮರೆತು ಜನರಿಗೆ ಸಾತ್ವಿಕ ಆನಂದ ನೀಡುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಅವರು ನಿಜವಾದ ಕಲಾ ಯೋಗಿಗಳು ಎನಿಸಿಕೊಂಡಿದ್ದಾರೆ ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗದ ಪ್ರೊ.ಬಿ.ವಿ.ಆಚಾರ್ಯ ದತ್ತಿ ಯಕ್ಷನಿಧಿ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ಆಯೋಜಿಸಲಾದ ಕಲಾವಿದರ 17ನೆ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು. ಯಕ್ಷಗಾನ ಕಲೆಗೆ ಉತ್ತಮ ಭವಿಷ್ಯವಿದೆ. ಇಂದು ಅನೇಕ ಯುವ ಕಲಾವಿದರು ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಬರುತ್ತಿದ್ದಾರೆ ಎಂದರು.
ರಾಜ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಯಕ್ಷಗಾನ ಹುಟ್ಟಿದ್ದು ಉಡುಪಿಯಲ್ಲಿ ಎಂಬ ವಾದ ಇದೆ. ಹಾಗಾಗಿಯೇ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಯಾವುದೇ ಭಾಗ ದಲ್ಲಿ ನೀಡದಷ್ಟು ಕೊಡುಗೆ ಉಡುಪಿಯಲ್ಲಿ ನೀಡಲಾಗುತ್ತದೆ. ಹಲವು ಕಲಾ ವಿದರ ಬದುಕು ತೀರಾ ಕಷ್ಟದಲ್ಲಿದೆ. ಅವರನ್ನು ಮೇಲಕ್ಕೆತ್ತುವ ಕಾರ್ಯವನ್ನು ಕಲಾರಂಗ ಮಾಡುತ್ತಿದೆ ಎಂದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ ದರು. ಆಕಾಶವಾಣಿ ಧಾರವಾಡದ ದಿವಾಕರ ಹೆಗಡೆ ಬರೆದ ‘ಮೋಹಮೇನಕೆ’ ಪ್ರಸಂಗ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಯಕ್ಷನಿಧಿ ಸದಸ್ಯರಿಗೆ ಗುಂಪು ವಿಮೆ, ಮೆಡಿಕ್ಲೈಂ, ಗೃಹ ನಿರ್ಮಾಣಕ್ಕೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗೋವಿಂದ ಭಟ್ ಅವರನ್ನು ಅಭಿ ನಂದಿಸಲಾಯಿತು.
ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಕಿಶೋರ್ ಆಳ್ವ, ಯಕ್ಷಧ್ರುವ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕೋಟ ಗೀತಾನಂದ ಫೌಂಡೇಶನ್‌ನ ಆನಂದ ಸಿ.ಕುಂದರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ಪಿ.ಕಿಶನ್ ಹೆಗ್ಡೆ, ಮಂಟಪ ಪ್ರಭಾಕರ ಉಪಾಧ್ಯ, ದಿವಾಕರ ಹೆಗಡೆ, ಸಸಿಹಿತ್ಲು ಮೇಳದ ಸಂಚಾಲಕ ಬಿ.ದಯಾನಂದ, ವಿಮರ್ಶಕ ಪ್ರಭಾಕರ ಜೋಶಿ ಮುಖ್ಯ ಅತಿಥಿಗಳಾಗಿದ್ದರು.
ಕಲಾರಂಗದ ಉಪಾಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿದ್ದರು. ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.