ಮಂಗಳೂರು ರೈಲು ನಿಲ್ದಾಣ ಅಂತಾರಾಷ್ಟ್ರೀಯ ದರ್ಜೆಗೆ: ಟೆಂಡರ್ ಪ್ರಕ್ರೀಯಗೆ ಚಾಲನೆ- ನಳಿನ್ ಕುಮಾರ್ ಕಟೀಲ್‌

Update: 2017-05-31 15:32 GMT

ಮಂಗಳೂರು, ಮೇ 31: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವ ಪ್ರಕ್ರೀಯೆಗೆ ಚಾಲನೆ ದೊರೆತಿದೆ. ಇದರ ಅಂಗವಾಗಿ 70 ಕೋಟಿ ರೂ. ಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಂಗಳೂರು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ದ.ಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಇಂದು ಮಾತನಾಡುತ್ತಿದ್ದರು.

ಮಂಗಳೂರು ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀ ದರ್ಜೆಯ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲು ಸುಮಾರು ನೂರು ಎಕ್ರೆ ಭೂಮಿಯ ಅಗತ್ಯವಿದೆ. ಸದ್ಯ ಹಾಲಿ ರೈಲ್ವೇ ಇಲಾಖೆಯಲ್ಲಿ 20 ಎಕ್ರೆ ಭೂಮಿ ಇದ್ದು ಉಳಿದಂತೆ ಪಕ್ಕದಲ್ಲಿರುವ ಸರಕಾರಿ ಭೂಮಿಯನ್ನು ರೈಲ್ವೇ ಇಲಾಖೆಗೆ ಹಸ್ತಾಂತರಿಸುವ ಕೆಲಸ ಆಗಬೇಕಾಗಿದೆ. ಈ ಕೆಲಸವನ್ನು ಶೀಘ್ರವಾಗಿ ನಿರ್ವಹಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಸಮೀಪ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ 5 ಕೋಟಿ ರೂ ವೆಚ್ಚದಲ್ಲಿ ಸ್ವಚ್ಛ ಭಾರತ್ ಆಭಿಯಾನದ ಅಂಗವಾಗಿ ಶುದ್ಧ ಕುಡಿಯುವ ನೀರು,ಸರಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ಟಾಯ್ಲೆಟ್ ಹಾಗೂ ಉಪಹಾರ ಗೃಹ ಗಳನ್ನೊಳಗೊಂಡ ಸಂಕೀರ್ಣವನ್ನು ನಿರ್ಮಿಸಲಾಗುವುದು. ಈ ಯೋಜನೆಗೆ ಸ್ಥಳ ಗುರುತಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ 2011ರ ಗಣತಿಯ ಪ್ರಕಾರ ಗುರುತಿಸಲಾದ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ 2016-17ನೆ ಸಾಲಿನಲ್ಲಿ 973 ಮಂದಿಗೆ ನಿವೇಶನ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಲಾಗಿದೆ. ಕಂದಾಯ ಇಲಾಖೆಯಿಂದ 459.94 ಎಕರೆ ಜಮೀನು ಹಸ್ತಾಂತರವಾಗಿದ್ದು, ಹೊರತಾಗಿ 688.44ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ. ಸುಳ್ಯ ತಾಲೂಕಿನಲ್ಲಿ 7 ಫಲಾನಿಭವಿಗಳನ್ನು ಆಯ್ಕೆ ಮಾಡಲಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 75 ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಲಾಗಿದೆ. 2016-17ನೆ ವಾಜಪೇಯಿ ನಗರ ವಸತಿ ಯೋಜನೆಯಡಿ 1285 ಗುರಿ ನಿಗದಿ ಪಡಿಸಲಾಗಿದ್ದು ಈ ಪೈಕಿ 1204 ಫಲಾನುಭವಿಗಳನ್ನು ಆಯ್ಕೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಮೋದನೆ ಪಡೆಯಲಾಗಿದೆ. ಕೆಲವು ಕಡೆ ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆ ಇರುವ ಕಡೆ ಜಂಟಿ ಸರ್ವೆ ಕಾರ್ಯವನ್ನು ಶೀಘ್ರವಾಗಿ ನಡೆಸುವಂತೆ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲಕ್ಕೆ ಮುಂಚಿತವಾಗಿ ಜನರಿಗೆ ಮೆಸ್ಕಾಂ ಹಾಗೂ ಇತರ ಇಲಾಖೆಗಳಿಂದ ಅಗಬಹುದಾದ ಸಮಸ್ಯೆಯನ್ನು ನಿವಾರಿಸಲು ಜನರ ನೆರವಿಗಾಗಿ ಕಾರ್ಯಾಚರಣೆಗೆ ತುರ್ತ ತಂಡ ರಚಿಸಿ ಅಪಾಯಕಾರಿ ಸ್ಥಿತಯಲ್ಲಿರುವ ವಿದ್ಯುತ್ ತಂತಿ ಹಾಗೂ ಇತರ ಸಲಕರಣೆಗಳು ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಸಂಬಂಧಿಸಿದಂತೆ ತುರ್ತು ಕಾರ್ಯಾಚರಣೆ ನಡೆಸಲು ನಳಿನ್ ಕುಮಾರ್ ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ತ್ಯಾಜ್ಯಗಳನ್ನು ಸಂಬಂಧ ಪಟ್ಟ ಗ್ರಾಮ ಪಂಚಾಯತ್‌ಗಳು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಟೋಲ್ ಪ್ಲಾಜಾದ ಬಳಿ 200ಲೀಟರ್ ಸಾಮರ್ಥ್ಯದ ಕಸದ ತೊಟ್ಟಿ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ನರ್ಮ್ ಬಸ್:- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಂಗಳೂರು ನಗರಕ್ಕೆ 35 ನರ್ಮ್ ಬಸ್‌ಗಳು ಹಂಚಿಕೆಯಾಗಿದ್ದು ಈ ಪೈಕಿ 21 ನರ್ಮ್ ಬಸ್‌ಗಳು ಓಡಾಟ ಆರಂಭಿಸಿವೆ. ಇನ್ನೂ 14 ಬಸ್ಸುಗಳು ಕಾರ್ಯಾಚರಣೆ ಆರಂಭಿಸಬೇಕಾಗಿದೆ, ಸದರಿ ಕಾರ್ಯಾಚರಣೆಗೆ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆಯಾಗಿರುತ್ತದೆ. ಈ ಸಂಬಂಧ ಕೇಂದ್ರ ಕಚೇರಿ ಕಾನೂನು ಶಾಖೆಯಿಂದ ತಡೆಯಾಜ್ಞೆ ತೆರವು ಗೊಳಿಸುವ ಪ್ರಕ್ರೀಯೆ ನಡೆಯುತ್ತಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

2016-17ನೆ ಸಾಲಿನಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕೇಂದ್ರ ಸರಕಾರದಿಂದ 123 ಕಾಮಗಾರಿಗಳಿಗೆ 500 ಕೋಟಿ ರೂ. ಬಿಡುಗಡೆಗೆ ಅನುಮೋದನೆ ದೊರೆತಿದೆ. ಈ ಪೈಕಿ 115 ಕಾಮಗಾರಿಗಳ ಕ್ರೀಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.12 ಕಾಮಗಾರಿ ಪೂರ್ಣಗೊಂಡಿದೆ. 117.72 ಕೋಟಿ ರೂಗಳ 39 ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಕೇಂದ್ರ ಸರಕಾರದ ಅನುದಾನ ಜಿಲ್ಲೆಗೆ ಬಂದರೂ ಅಧಿಕಾರಿಗಳು ತ್ವರಿತವಾಗಿ ಕ್ರಮಕೈಗೊಳ್ಳದೆ ಸಾಕಷ್ಟು ಕಾಮಗಾರಿಗಳಿಗೆ ಬಿಡುಗಡೆಯಾದ ಹಣ ಬಳಕೆಯಾಗದೆ ಸರಕಾರಕ್ಕೆ ಮರಳಿ ಹೋಗುತ್ತಿರುವುದಕ್ಕೆ ಇಲ್ಲಿನ ಅಧಿಕಾರಿಗಳು ಕಾರಣರಾಗಿದ್ದರೆ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News