ಅಲೆವೂರು: ವಿವಿಧ ಕಾಮಗಾರಿಗಳಿಗೆ ಚಾಲನೆ
ಉಡುಪಿ, ಮೇ 31: ಗಾಂದಿ ಪಥ- ಗ್ರಾಮ ಪಥ (ನಮ್ಮ ಗ್ರಾಮ-ನಮ್ಮ ರಸ್ತೆ) ಯೋಜನೆಯಡಿ ಸುಮಾರು 184.68 ಲಕ್ಷ ರೂ. ವೆಚ್ಚದಲ್ಲಿ ಅಲೆವೂರು ಗ್ರಾಪಂ ವ್ಯಾಪ್ತಿಯ ಅಲೆವೂರು- ಮಣಿಪಾಲ ಕ್ರಾಸ್ ರಸ್ತೆಯಿಂದ ನೆಹರೂ ನಗರ-ನೈಲಪಾದೆ-ಕಲ್ಮಂಜೆ ರಸ್ತೆ ಅಗಲೀಕರಣ ಕಾಮಗಾರಿಗೆ ಮಾಜಿ ಸಚಿವ, ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಜೂ.1ರಂದು ಬೆಳಗ್ಗೆ 9:30ಕ್ಕೆ ಅಲೆವೂರು ನೆಹರೂ ನಗರದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಅಲೆವೂರು ಗ್ರಾಪಂ ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಯಡಿ ಶಾಸಕರ ವಿಶೇಷ ಪ್ರಯತ್ನದಿಂದ ಮಂಜೂರಾದ ಅಲೆವೂರು ನೆಹರೂ ನಗರ ಸೆಲ್ವ ಅವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ (5 ಲಕ್ಷ ರೂ.) ಮತ್ತು ಕೊರಂಗ್ರಪಾಡಿ ವಾರಿಜಾ ಬಂಗೇರ ಅವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ (5 ಲಕ್ಷ ರೂ.) ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ.
ಮಾರ್ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿ ಪಡಿಸಿದ ರಸ್ತೆ, ಕೊರಂಗ್ರಪಾಡಿ ರೇಣುಕಾ ಶೆಟ್ಟಿ ಮನೆ ಬಳಿ ಅಭಿವೃದ್ಧಿಗೊಳಿಸಿದ ಕಾಂಕ್ರಿಟೀಕೃತ ರಸ್ತೆ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ದಿಂದ 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದ ಮದಗ ಕೆರೆಯ ಉದ್ಘಾಟನಾ ಕಾರ್ಯಕ್ರಮವೂ ಜರಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.