ಯುಪಿಎಸ್‌ಸಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಕೋಲಾರದ ಕೆ.ಆರ್. ನಂದಿನಿ ದೇಶಕ್ಕೆ ಪ್ರಥಮ
ಹೊಸದಿಲ್ಲಿ, ಮೇ 31: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2016ನೆ ಸಾಲಿನಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ, ಕರ್ನಾಟಕದ ಕೆ.ಆರ್ . ನಂದಿನಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಕೋಲಾರ ತಾಲ್ಲೂಕಿನ ಕೆಂಬೋಡಿ ಗ್ರಾಮದವರಾದ ನಂದಿನಿ ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದ ನಂದಿನಿ, ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.
ಪ್ರಸ್ತುತ ನಂದಿನಿಯವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಅವರ ತಂದೆ ರಮೇಶ್ ಸರಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ದಿಲ್ಲಿಯ ಕರ್ನಾಟಕ ಭವನದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಗಿ ಕೆಲಸ ಆರಂಭಿಸಿದ್ದ ನಂದಿನಿ, ಕಳೆದ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ 642ನೆ ರ್ಯಾಂಕ್ ಗಳಿಸಿದ್ದರು. ಐಆರ್ ಎಸ್ ಗೆ ಆಯ್ಕೆಯಾಗಿರುವ ನಂದಿನಿ ಫರಿದಾಬಾದ್ ನಲ್ಲಿ ತರಬೇತಿಯಲ್ಲಿದ್ದು, ಈ ನಡುವೆಯೇ ಮತ್ತೊಮ್ಮೆ ಯುಪಿಎಸ್‌ಸಿ ಪರೀಕ್ಷೆ ಬರೆದು ಈ ಸಾಧನೆ ಮೆರೆದಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅನ್‌ಮೋಲ್ ಶೇರ್ ಸಿಂಗ್ ಬೇಡಿ ದ್ವಿತೀಯ, ಗೋಪಾಲಕೃಷ್ಣ ರೋನಂಕಿ ತೃತೀಯ, ಸೌಮ್ಯ ಪಾಂಡೆ ನಾಲ್ಕನೆ ಮತ್ತು ಅಭಿಲಾಷ್ ಮಿಶ್ರಾ ಐದನೆ ರ‍್ಯಾಂಕ್ ಪಡೆದಿದ್ದಾರೆ.