×
Ad

ರಿತೇಶ್ ಕೊಲೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜೀವಾವಧಿ

Update: 2017-05-31 22:07 IST

ಮಂಗಳೂರು, ಮೇ 31: ಎರಡು ವರ್ಷಗಳ ಹಿಂದೆ ದೇರೆಬೈಲ್ ನೆಕ್ಕಿಲಗುಡ್ಡೆಯಲ್ಲಿ ನಡೆದ ರಿತೇಶ್ ಯಾನೆ ರಿತೇಶ್ ಶೆಟ್ಟಿಗಾರ್ ಯಾನೆ ರೀತು (29) ಕೊಲೆ ಪ್ರಕರಣದ ಇಬ್ಬರು  ಅಪರಾಧಿಗಳಿಗೆ ಮಂಗಳೂರಿನ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 1,12,000 ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

ನೆಕ್ಕಿಲಗುಡ್ಡೆಯ ಪ್ರಭಾಕರ ಅಂಚನ್ ಯಾನೆ ಪ್ರಭಾ (38) ಮತ್ತು ದೇರೆಬೈಲ್ ಲೋಹಿತ್‌ ನಗರದ ನಿಶಾಂತ್ ಯಾನೆ ನಿಶಾಂತ್ ಕಾವೂರು (33) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು.

ಪ್ರಕರಣದ ಇತರ ಮೂವರು ಆರೋಪಿಗಳಾದ ವಿನೋದ್‌ ರಾಜ್ ಶೆಟ್ಟಿ ಯಾನೆ ಬೋಟಿ, ಶೈಲೇಶ್ ಶೆಟ್ಟಿ ಯಾನೆ ಶೈಲು ಮತ್ತು ಭರತೇಶ್ ಅವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ.

2015 ಮಾರ್ಚ್ 30ರಂದು ಮುಂಜಾನೆ 1.30 ಕ್ಕೆ ನೆಕ್ಕಿಲಗುಡ್ಡೆ ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದ ಆವರಣ ಗೋಡೆ ಬಳಿ ರಿತೇಶ್ ಶೆಟ್ಟಿಗಾರ್ ಅವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಲಾಗಿತ್ತು. ತಡೆಯಲು ಬಂದಿದ್ದ ಮಾಲೆಮಾರ್‌ನ ಲೋಹಿತ್, ಕೊಟ್ಟಾರ ಚೌಕಿಯ ಮಿಥುನ್ ಮತ್ತು ನೀರುಮಾರ್ಗದ ಯತೀಶ್ ಅವರ ಮೇಲೂ ಹಲ್ಲೆ ನಡೆಸಿದ್ದು, ಗಾಯಗೊಂಡಿದ್ದರು.

ಪ್ರಭಾಕರ ಅಂಚನ್‌ಗೆ ರಿತೇಶ್ ಶೆಟ್ಟಿಗಾರ್ ಈ ಹಿಂದೆ ಸಾಲವನ್ನು ನೀಡಿದ್ದು ಅದನ್ನು ವಾಪಸ್ ಕೊಡುವಂತೆ ರಿತೇಶ್ ಶೆಟ್ಟಿಗಾರ್ ಒತ್ತಾಯಿಸಿದ್ದರು. ಈ ವಿಷಯದಲ್ಲಿ ಜಗಳ ಉಂಟಾಗಿ ಅದು ತಾರಕಕ್ಕೇರಿ ಮಾರಕಾಯುಧಗಳಿಂದ ರಿತೇಶ್ ತಲೆಗೆ ಕಡಿದಿದ್ದರು ಎಂದು ಆರೋಪಿಸಲಾಗಿತ್ತು.

ತೀವ್ರ ಗಾಯಗೊಂಡಿದ್ದ ರಿತೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಉಮೇಶ್ ಕುಮಾರ್‌ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಪ್ರಭಾರ ಇನ್ಸ್‌ಪೆಕ್ಟರ್ ಲೋಕೇಶ್ ಎ.ಸಿ. ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ. ಭವಾನಿ ಅವರು ಪ್ರಭಾಕರ ಅಂಚನ್ ಯಾನೆ ಪ್ರಭಾ ಮತ್ತು ನಿಶಾಂತ್ ಯಾನೆ ನಿಶಾಂತ್ ಕಾವೂರು ಅವರಿಗೆ ಕೊಲೆ ಕೃತ್ಯಕ್ಕೆ (ಐಪಿಸಿ 302) ಜೀವಾವಧಿ ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಸಜೆ ಅನುಭವಿಸಬೇಕೆಂದು ತೀರ್ಪು ನೀಡಿದ್ದಾರೆ.

ಐಪಿಸಿ 307 (ಕೊಲೆ ಯತ್ನ) ಅಪರಾಧಕ್ಕೆ ಇಬ್ಬರಿಗೂ 5 ವರ್ಷ ಸಜೆ ಮತ್ತು ತಲಾ 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಶಿಕ್ಷೆ, ಐಪಿಸಿ 324 (ಗಾಯಗೊಳಿಸುವಿಕೆ) ಅನ್ವಯ ಇಬ್ಬರಿಗೂ 2 ವರ್ಷ ಶಿಕ್ಷೆ ಮತ್ತು ತಲಾ 1000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 3 ತಿಂಗಳ ಸಜೆ, ಐಪಿಸಿ 323 (ಕೈಯಲ್ಲಿ ಹೊಡೆದು ಗಾಯಗೊಳಿಸುವುದು) ಅನ್ವಯ 6 ತಿಂಗಳ ಸಜೆ ಮತ್ತು ತಲಾ 1000 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 1 ತಿಂಗಳ ಶಿಕ್ಷೆಯನ್ನು ಅನುಭವಿಸ ಬೇಕೆಂದೂ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.

ದಂಡ ಮೊತ್ತದಲ್ಲಿ 50,000 ರೂ,. ಗಳನ್ನು ಸರಕಾರಕ್ಕೆ ಪಾವತಿಸ ಬೇಕು ಹಾಗೂ ಉಳಿದ ಮೊತ್ತವನ್ನು ಕೊಲೆಯಾದ ರಿತೇಶ್ ಅವರ ತಾಯಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ರಿತೇಶ್ ತಾಯಿಗೆ ಯೋಗ್ಯ ಪರಿಹಾರವನ್ನು ದೊರಕಿಸಿಕೊಡುವಂತೆಯೂ ನಿರ್ದೇಶನ ನೀಡಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದಿಯಾವರ್ ಅವರು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News