ಬೆಳ್ತಂಗಡಿ ಪ.ಪಂ. ಸಾಮಾನ್ಯ ಸಭೆ
ಬೆಳ್ತಂಗಡಿ, ಮೇ 31: ಬೆಳ್ತಂಗಡಿ ಪಟ್ಟಣ ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ಮಂಗಳೂರು-ವಿಲ್ಲಪುರಂ 234 ರಾಷ್ಟ್ರೀಯ ಹೆದ್ದಾರಿಯನ್ನು 24 ಮೀ. ಅಗಲದ ರಸ್ತೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬರೆದುಕೊಳ್ಳುವುದೆಂದು ಬುಧವಾರ ನಡೆದ ಪ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯು ಪಟ್ಟಣ ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೆಲವು ದಿನಗಳ ಹಿಂದೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳ ಹಾಗು ಮನೆ ಮಾಲಕರ, ಸಾರ್ವಜನಿಕರೊಂದಿಗೆ ಅಗಲೀಕರಣದ ಬಗ್ಗೆ ಸಮಾಲೋಚನೆ ನಡೆದಿತ್ತು. ಸಭೆಯಲ್ಲಿ ಬದಲಿ ಹೆದ್ದಾರಿಯ ಬಗ್ಗೆ ಚರ್ಚೆ ನಡೆದಿತ್ತು. ಈ ಹಿನ್ನಲೆಯಲ್ಲಿ ಸಾರ್ವಜನಿಕರು, ಬದಲಿ ಹೆದ್ದಾರಿ ಬೇಡ. ಈಗಿರುವ ಹೆದ್ದಾರಿಯನ್ನು ಎರಡೂ ಬದಿಯಲ್ಲಿ 6 ರಿಂದ 10 ಮೀ. ಅಗಲೀಕರಿಸುವಂತೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸಭೆಯಲ್ಲಿ ಅಧ್ಯಕ್ಷರು ಮಂಡಿಸಿದ್ದರು. ಈ ಬಗ್ಗೆ ಚರ್ಚೆ ನಡೆದು ಈಗಿರುವ ರಸ್ತೆಯ ಮಧ್ಯದಿಂದ ಎರಡೂ ಬದಿಯಲ್ಲಿ 12 ಮೀ. ಅಂದರೆ ಒಟ್ಟು 24 ಮೀ. ವಿಸ್ತರಿಸುವಂತೆ ಪ್ರಾಧಿಕಾರಕ್ಕೆ ಪತ್ರ ಬರೆದು ಕಳುಹಿಸುವುದೆಂದು ನಿರ್ಧರಿಸಲಾಯಿತು.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕಿ ರೂಪಾ ಸಿ.ಕೆ. ಅವರು ನಗರಾಭಿವೃದ್ದಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. 2013ರಲ್ಲಿ ಯೋಜನಾ ಪ್ರಾಧಿಕಾರದ ಘೋಷಣೆ ಆಗಿತ್ತು. ಆದರೆ ಅದರ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಇದೀಗ ಎರಡು ವರ್ಷದ ಬಳಿಕ ಮಹಾಯೋಜನೆ ಸಿದ್ಧವಾಗಿದೆ. ಯೋಜನೆಯ ಪ್ರಕಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಣಿಜ್ಯ ಹಾಗು ಗೃಹ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಬೇಕಾದಲ್ಲಿ ಕಡ್ಡಾಯವಾಗಿ ಯೋಜನಾ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲೇಬೇಕು. 6 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಾಣ ಮಾಡುವುದಾದರೆ ಪ್ರಾಧಿಕಾರದ ಸ್ಥಳೀಯ ಯೋಜನಾ ಅಧಿಕಾರಿಯಿಂದ ಅನುಮತಿ ಪಡೆದು ತಹಸೀಲ್ದಾರರ ಮೂಲಕ ಮಾಡಿಸಿಕೊಳ್ಳಬಹುದಾಗಿದೆ. ಅದಕ್ಕಿಂತ ಹೆಚ್ಚು ಸ್ಥಳದಲ್ಲಿ ಗೃಹ ಯಾ ಇತರೆ ಕಟ್ಟಡ ನಿರ್ಮಾಣವಾಗಬೇಕಾದರೆ ಮಂಗಳೂರಿನ ಯೋಜನಾ ಪ್ರಾಧಿಕಾರದಿಂದಲೇ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಈ ಬಗ್ಗೆ ಸಮಿತಿ ರಚಿಸಲಾಗಿದ್ದು ಪಂ.ಪ ಅಧ್ಯಕ್ಷರಾಗಿದ್ದು ಮುಖ್ಯಾಧಿಕಾರಿ ಕಾರ್ಯದರ್ಶಿಯಾಗಿದ್ದು, ಪಂ. ಜನಪ್ರತಿನಿಧಿಗಳು ಸದಸ್ಯರಾಗಿದ್ದಾರೆ ಎಂದು ರೂಪಾ ವಿವರಿಸಿದರು.
ಈ ಸಂದರ್ಭ ಅವರು ಬೆಳ್ತಂಗಡಿ ಪ.ಪಂ. ನಗರಾಭಿವೃದ್ಧಿ ಯೋಜನೆಯ ನೀಲ ನಕಾಶೆ ತಯಾರಿಸಲಾಗಿದ್ದು, ಈಗಿರುವ ಬೆಳ್ತಂಗಡಿಯ ಪ್ರಸ್ತುತ ಸ್ಥಿತಿಯ ನಕಾಶೆಯನ್ನು ಪ್ರದರ್ಶಿಸಿದರು. ಇದರಲ್ಲಿ ಲೋಪ,ದೋಷಗಳಿದ್ದಲ್ಲಿ 60 ದಿನಗಳ ಒಳಗೆ ಪ.ಪಂ. ನಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ಇದೆಯೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಪ.ಪಂ. ವ್ಯಾಪ್ತಿಯ ರಾ.ಹೆ. ಬದಿಯಲ್ಲಿರುವ ಗೃಹ ಅಥವಾ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ರಸ್ತೆ ಭೂ ಗಡಿಯಿಂದ ಇಲಾಖೆಯು ನಿರ್ಧರಿಸುವ ಅಂತರವನ್ನು ಕಡಿಮೆ ಮಾಡುವಂತೆ ಮತ್ತು ನಿರ್ಮಾಣಕ್ಕೆ ಯೋಗ್ಯವಾಗುವಂತೆ ಇಲಾಖೆಯು ಅನುಮತಿಯನ್ನು ನೀಡುವಂತೆ ಬರೆದುಕೊಳ್ಳುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಪಂ. ವ್ಯಾಪ್ತಿಯಲ್ಲಿನ ಚರಂಡಿಗಳನ್ನು ಸ್ವಚ್ಛ ಮಾಡುವ ಬಗ್ಗೆ ಶೀಘ್ರವಾಗಿ ಟೆಂಡರ್ ಕರೆಯಲಾಗುವುದು. ನೀರು ನಿಲ್ಲುವ ಕಡೆ ದುರಸ್ತಿ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ವತಿಯಿಂದ ಈಗಾಗಲೇ ಕ್ರಮಕೈಗೊಳ್ಳಲಾಗುತ್ತಿದೆ. ಎಳನೀರು ಅಂಗಡಿಯವರು, ಮತ್ತು ಟಯರ್ ಪಂಕ್ಚರ್ ಅಂಗಡಿಯವರು ಮಳೆಗಾಲದಲ್ಲಿ ಸೂಕ್ತ ಸೂಚನೆ ನೀಡಲಾಗುವುದು ಎಂದು ತಿಳಿಸಲಾಯಿತು.
ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಇಂಜಿನಿಯರ್ ಮಹಾವೀರ್, ಯೋಜನಾಧಿಕಾರಿ ವೆಂಕಟ್ರಮಣ ಶರ್ಮ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಯೋಜಕರಾದ ಪ್ರವೀಣ್ ವಿ.ಎನ್. ಹಾಗೂ ಒಬೇದುಲ್ಲಾ, ತಾಲೂಕು ಆರೋಗ್ಯ ಪರಿವೀಕ್ಷಕ ಗಿರೀಶ್, ಮೆಸ್ಕಾಂ ಸಹಾಯ ಇಂಜಿನಿಯರ್ ಸಜಿಕುಾರ್, ಪಂ. ಸದಸ್ಯರು ಇದ್ದರು.