ಗೋಮಾಂಸ ವ್ಯಾಪಾರದ ಮೇಲೆ ಕೇಂದ್ರದ ಕಣ್ಣು: ಐವನ್ ಡಿಸೋಜ
ಮಂಗಳೂರು, ಜೂ.1: ಗೋ ಮಾಂಸ ವ್ಯಾಪಾರ ಮಾಡುವ ಬಹುತೇಕ ಜನರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು. ಅವರಿಂದ ಆ ವ್ಯವಹಾರವನ್ನು ತಪ್ಪಿಸಬೇಕೆಂಬ ಹುನ್ನಾರದಿಂದ ಕೇಂದ್ರ ಸರಕಾರ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಆದರೆ ವಿದೇಶಗಳಿಗೆ ರ್ತಾಗುತ್ತಿರುವ ಗೋ ಮಾಂಸವನ್ನು ತಡೆಯುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿಲ್ಲ ಎಂದು ಐವನ್ ಡಿಸೋಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಕೇಂದ್ರದ ಗೋಹತ್ಯೆ ನಿಷೇಧದ ಹೊಸ ನಿಯಮವನ್ನು ವಿರೋಧಿಸಿ ಮಾತನಾಡಿದ ಅವರು, ಗೋವುಗಳ ರಕ್ಷಣೆ ಬಗ್ಗೆ ಮಾತನಾಡುವ ಕೇಂದ್ರ ಸರಕಾರವೇ ಗೋ ಶಾಲೆಗಳನ್ನು ತೆರೆದು ಅನುದಾನ ನೀಡಲಿ ಎಂದು ಒತ್ತಾಯಿಸಿದರು.
ಹೈಕಮಾಂಡ್ ಸೀಟು ನೀಡುವಲ್ಲಿ ಸ್ಪರ್ಧೆ
ಮುಂಬರುವ ವಿಧಾನಸಭಾ ಚುನಾವಣೆಯು ನಿಗದಿತ ಅವಧಿಯಲ್ಲೇ ನಡೆಯಲಿದ್ದು, ಹೈಕಮಾಂಡ್ ಎಲ್ಲಿ ಸೀಟು ನೀಡುತ್ತದೋ ಅಲ್ಲಿಂದ ಸ್ಪರ್ಧಿಸಲು ತಾನು ಸಿದ್ಧ ಎಂದು ಐವನ್ ಡಿಸೋಜ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ 2018ರ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಎಐಸಿಸಿಯು ರಾಜ್ಯದಲ್ಲಿ ಬಲಿಷ್ಠ ನಾಯಕತ್ವವನ್ನು ಒದಗಿಸಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಬ್ಲಾಕ್, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಎಐಸಿಸಿ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿ ಜವಾಬ್ದಾರಿಯುತ ನಾಯಕರನ್ನು ಬೆಂಗಳೂರಿಗೆ ಕರೆಸಿ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಚರ್ಚಿಸಿ ಎಲ್ಲ ಸಮುದಾಯಕ್ಕೂ ಪ್ರಾಮುಖ್ಯತೆ ನೀಡಿ ಉತ್ತಮ ನಾಯಕತ್ವವನ್ನು ನೀಡಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಆಡಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಸ್ಥಿರ ಸರಕಾರ ಹಾಗೂ ಜನಪರ ಯೋಜನೆಗಳನ್ನು ಮುಂದಿಟ್ಟು ಮುಂಬರುವ ಚುನಾವಣೆಯಲ್ಲಿ ಜನರ ಬಳಿ ಮತ ಯಾಚಿಸಲಿದೆ. ಹಿಂದೆಂದಿಗಿಂತಲೂ ಪಕ್ಷದ ನಾಯಕತ್ವ ಬಲಿಷ್ಠವಾಗಿದೆ ಎಂದವರು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದಲೇ ಎಐಸಿಸಿ ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಲು ನಿರ್ಧರಿಸಿದೆ. ಅಲ್ಲದೆ ಡಾ.ಜಿ.ಪರಮೇಶ್ವರ್ ಅವರನ್ನು ಮುಂದಿನ ಅವಧಿಗೂ ಅಧ್ಯಕ್ಷರನ್ನಾಗಿ ಮುಂದುವರಿಸಿದೆ ಎಂದವರು ಹೇಳಿದರು.
ಗೋಹತ್ಯೆ ವಿಚಾರದಲ್ಲಿ ಸಂಘರ್ಷಕ್ಕೆ ದಾರಿ
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರವು ಗೋಹತ್ಯೆ ವಿಚಾರದಲ್ಲಿ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಪ್ರಯತ್ನದಲ್ಲಿದೆ. ಪರಿಸರ ಇಲಾಖೆ ಮೂಲಕ ಕೇಂದ್ರ ಸರಕಾರ ಗೋಹತ್ಯೆ ವಿಷಯಕ್ಕೆ ಸಂಬಂಧಿಸಿ ನಿರ್ದೇಶನಗಳನ್ನು ಜಾರಿಗೊಳಿಸಿರುವುದು ಜನರ ಆಹಾರ ಪದ್ಧತಿ ಮೇಲಿನ ಸವಾರಿಯಾಗಿದೆ ಎಂದವರು ಹೇಳಿದರು.
ಮೇಯರ್ ಕವಿತಾ ಸನಿಲ್, ಮಾಜಿ ಮೇಯರ್ ಅಶ್ರ್, ಸತೀಶ್, ಅಬೂಬಕರ್, ಅಲಿಸ್ಟರ್ ಡಿಕುನ್ಹ, ಮಹೇಶ್ ಕೋಡಿಕಲ್, ನಝೀರ್ ಬಜಾಲ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.