ಹೆದ್ದಾರಿಗಳಲ್ಲಿ ತ್ಯಾಜ್ಯ ಸುರಿಯುವ ವಿರುದ್ಧ ವಿನೂತನವಾಗಿ ವಿಶ್ವ ಪರಿಸರ ದಿನ ಆಚರಣೆಗೆ ಸಿದ್ಧತೆ

Update: 2017-06-01 13:47 GMT

ಮಂಗಳೂರು, ಜೂ.1: ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ತ್ಯಾಜ್ಯ ಸುರಿಯುವ ಸ್ಥಳಗಳಲ್ಲಿ ಪ್ರತಿಭಟನಾತ್ಮಕ ಕ್ರಮವಾಗಿ ಮರಗಳನ್ನು ನೆಡುವ ಮೂಲಕ ವಿನೂತನ ರೀತಿಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ.

ರಾಜ್ಯಕ್ಕೆ ಮಾದರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗೊಳಪಡುವ 35 ಗ್ರಾಮ ಪಂಚಾಯತ್‌ಗಳಲ್ಲಿ ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಶನ್ ಹಾಗೂ ರಾಮಕೃಷ್ಣ ಮಿಶನ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.

ಕಾರ್ಯಕ್ರಮದ ಕುರಿತಂತೆ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆದ್ದಾರಿಗಳಲ್ಲಿ ತ್ಯಾಜ್ಯ ಸುರಿಯುವ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಈಗಾಗಲೇ ಐದು ಮಾರ್ಗಗಳನ್ನು ಗುರುತಿಸಿದೆ. ಈ ಐದು ಹೆದ್ದಾರಿ ಮಾರ್ಗಗಳಲ್ಲಿ ಸುಮಾರು 60 ರಿಂದ 70 ಟನ್‌ಗಳಷ್ಟು ಕಸ ಸುರಿದಿರುವುದು ಈಗಾಗಲೇ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ರಚಿಸಲಾಗಿರುವ ಗಸ್ತು ಕಾವಲು ಪಡೆಯು ಗುರುತಿಸಿದೆ. ಸ್ವಚ್ಛ ನಗರವಾಗಿ ಮಂಗಳೂರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವಂತೆಯೇ ಗ್ರಾಮ ಮಟ್ಟದಲ್ಲಿಯೂ ಜಿಲ್ಲೆಯನ್ನು ಸ್ವಚ್ಛವನ್ನಾಗಿಸುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್‌ನ ಕಾಯ್ದೆ ಪ್ರಕಾರ ಗ್ರಾಮ ಮಟ್ಟದಲ್ಲಿ ಶುಚಿತ್ವ ಕಾಪಾಡುವುದು ಅವರ ಹೊಣೆಗಾರಿಕೆ. ಆದರೆ, ತ್ಯಾಜ್ಯಗಳನ್ನು ಬೇಕಾಬಿಟ್ಟಿಯಾಗಿ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತಹ ಯಾವುದೇ ಅವಕಾಶಗಳು ಕಾಯ್ದೆಯಲ್ಲಿ ಇಲ್ಲದಿರುವುದೇ ಸಮಸ್ಯೆಗೆ ಕಾರಣ. ವಿಶ್ವ ಪರಿಸರ ದಿನದಂದು ಗುರುತಿಸಲಾದ ಹೆದ್ದಾರಿಗಳಲ್ಲಿನ ಸ್ಥಳಗಳಿಂದ ಕಸವನ್ನು ತೆರವುಗೊಳಿಸಲಾಗುವುದು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಆ ಸ್ಥಳಗಳಲ್ಲಿ ಗಿಡಗಳನ್ನು ನೆಡಲಾಗುವುದು ಎಂದು ಅವರು ಹೇಳಿದರು.

ಜಿ.ಪಂ.ಸದಸ್ಯ ಸುಚರಿತ ಶೆಟ್ಟಿ ಮಾತನಾಡಿ, ರಸ್ತೆಗಳಲ್ಲಿ ಹಾಗೂ ಜೀವ ನದಿಗಳಲ್ಲಿ ಕಸಗಳನ್ನು ಬಿಸಾಕುವ ಕೆಲಸಗಳಾಗುತ್ತಿದ್ದು, ಸ್ವಚ್ಚತೆಯನ್ನು ಕಾಯುವ ನಿಟ್ಟಿನಲ್ಲಿ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರು ಕೂಡಾ ಕೈಜೋಡಿಸಬೇಕು ಎಂದರು
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮ ಮಟ್ಟದ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಂಬಂಧಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಜಿ.ಪಂ.ಉಪಕಾರ್ಯದರ್ಶಿ ಎನ್.ಆರ್.ಉಮೇಶ್ ಸ್ವಾಗತಿಸಿದರು. ಜಿ.ಪಂ. ಸದಸ್ಯರಾದ ಧನಲಕ್ಷ್ಮಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು

ಹೆದ್ದಾರಿಗಳಲ್ಲಿ ಗುರುತಿಸಲಾದ ಐದು ರೂಟ್‌ಗಳು:
ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ರಾಷ್ಟ್ರೀಯ/ ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಸ ಸುರಿಯಲ್ಪಡುವ ಪ್ರಮುಖ ಸ್ಥಳಗಳನ್ನು 5 ರೂಟ್‌ಗಳನ್ನಾಗಿ ವಿಂಗಡಿಸಲಾಗಿದೆ.

 

ರೂಟ್ 1ರಲ್ಲಿ ಸೋಮೇಶ್ವರ, ತಲಪಾಡಿ, ರೂಟ್ 2ರಲ್ಲಿ ಮುನ್ನೂರು, ಬೆಳ್ಮ, ಕೊಣಾಜೆ, ಮಂಜನಾಡಿ, ಕುರ್ನಾಡು, ರೂಟ್-3ರಲ್ಲಿ ಅಡ್ಯಾರು, ನೀರುಮಾರ್ಗ, ಪುದು, ತುಂಬೆ, ಕಳ್ಳಿಗೆ, ಗೋಳ್ತಮಜಲು, ರೂಟ್-4ರಲ್ಲಿ ಗುರುಪುರ, ಕಂದಾವರ, ಗಂಜಿಮಠ, ಪಡುಪೆರಾರ, ಎಡಪದವು, ಕುಪ್ಪೆಪದವು, ಬಡಗ ಎಡಪದವು, ಪುತ್ತಿಗೆ ಹಾಗೂ ರೂಟ್-5ರಲ್ಲಿ ಬಜಪೆ, ಮಳವೂರುನಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ.
 

ಈ ಕಾರ್ಯಕ್ಕಾಗಿ 4 ಜೆಸಿಬಿ ಹಾಗೂ 6 ಲಾರಿಗಳ ಅಗತ್ಯವಿದ್ದು, ಆಯಾ ಪಂಚಾಯತ್‌ನ ಪಿಡಿಒಗಳು ಜವಾಬ್ಧಾರಿ ವಹಿಸಿಕೊಂಡಲ್ಲಿ ರಾಮಕೃಷ್ಣ ಮಿಶನ್‌ನಿಂದ ಟಿಪ್ಪರ್ ಹಾಗೂ ಜೆಸಿಬಿ ವ್ಯವಸ್ಥೆ ಒದಗಿಸಲಾಗುವುದು ಎಂದು ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News