ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಸಭೆ
ಮಂಗಳೂರು, ಜೂ.1: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ಸಭೆಯು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿ. ರಮಾನಾಥ ರೈ ಅಧಿಕಾರಶಾಹಿ ವರ್ಗದಿಂದ ಮುಂದಿನ ದಿನಗಳು ಕ್ಲಿಷ್ಟಕರವಾಗಲಿದೆ. ಯೂತ್ ಕಾಂಗ್ರೆಸ್ ಚಳುವಳಿ ಉತ್ತಮ ಚಳುವಳಿಯಾಗಬೇಕು. ಮತೀಯವಾದಿ ಶಕ್ತಿಗಳನ್ನು, ಅಸಹಿಷ್ಣುತೆಯನ್ನು ವಿರೋಧಿಸಿ ಸಮಾಜದ ಸಾಮರಸ್ಯವನ್ನು ಕಾಪಾಡಬೇಕು ಎಂದರು.
ಯೂತ್ ಕಾಂಗ್ರೆಸ್ ಚುನಾವಣೆಯು ಆಂತರಿಕ ಚುನಾವಣೆಯಾಗಿದೆ ಹಾಗೂ ವಿಧಾನಸಭಾ ಚುನಾವಣೆಯ ಹೋರಾಟದ ಭಾಗವಾಗಿದೆ. ಹಾಗೆಯೇ ರಾಜ್ಯ ಸರಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಬೇಕು. ಸರಕಾರ ನೀಡಿದ್ದ ಭರವಸೆಗಳಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಯೋಜನೆ ಸೇರಿದಂತೆ ಶೇ.90 ಭಾಗಗಳನ್ನು ಈಡೇರಿಸಿದೆ ಎಂದರಲ್ಲದೆ, ದೇಶದ ಆಡಳಿತ ಯಂತ್ರ ಹೆಚ್ಚಾಗಿ ಬಹುಸಂಖ್ಯಾತರ ಕೈಯಲ್ಲಿರುತ್ತದೆ. ಗುಜರಾತ್ ಹತ್ಯಾಕಾಂಡ ನಡೆದದ್ದು ಅಲ್ಲಿನ ಆಡಳಿತ ಯಂತ್ರದ ಕಾರಣದಿಂದ. ಹಾಗಾಗಿ ದೇಶದ ಸಂಸ್ಕೃತಿ, ಪರಂಪರೆ, ಭಾವೈಕ್ಯ, ಸಾಮರಸ್ಯ, ಸಂವಿಧಾನಗಳನ್ನು ಉಳಿಸುವ ಕೆಲಸವನ್ನು ಯೂತ್ ಕಾಂಗ್ರೆಸ್ ಮಾಡಬೇಕು. ಯೂತ್ ಕಾಂಗ್ರೆಸ್‌ನಲ್ಲಿ ಬೂತ್ ಮಟ್ಟದ ಏಜೆಂಟ್‌ನ್ನು ಮಾಡಬೇಕು ಎಂದು ರಮಾನಾಥ ರೈ ಕರೆ ನೀಡಿದರು.
ಡಿಸಿಸಿ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ಕಾಂಗ್ರೆಸ್ ಪಕ್ಷ ಜಾತ್ಯತೀತ ಸಿದ್ಧಾಂತದಿಂದ ಕೂಡಿದೆ. ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ತೋರಿಸುವ ಆಸಕ್ತಿಯನ್ನು ವಿಧಾನಸಭೆ ಚುನಾವಣೆಯಲ್ಲಿಯೂ ತೋರಿಸಬೇಕು. ಜಾತಿವಾದಿಗಳಾಗಿ ದೇಶ ಕಟ್ಟಲು ಸಾಧ್ಯವಿಲ್ಲ. ಗೋ ಮಾರಾಟ ನಿಷೇಧದ ಆದೇಶವು ಸಂಪ್ರದಾಯ ಮತ್ತು ಸಂಸ್ಕೃತಿಗೆ ವಿರುದ್ಧವಾಗಿದೆ. ಈ ಆದೇಶವನ್ನು ವಿರೋಧಿಸುವಾಗ ಕಾನೂನು, ಸಂವಿಧಾನ ಬದ್ಧವಾಗಿ ವಿರೋಧಿಸಿ ಮಾದರಿಯಾಗಬೇಕು. ಮುಂದಿನ ವಿಧಾನಸಭೆ ಚುನಾವಣೆಯ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಶಾಹುಲ್ ಹಮೀದ್ ಯುವ ಕಾಂಗ್ರೆಸ್ ಸಂಘಟನೆಯ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಆಡಳಿತ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಡಾ.ರಘು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಹಾಗೂ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಧ್ಯಕ್ಷರಾದ ಅಭಿನಂದನ್ ಹರೀಶ್ ಕುಮಾರ್, ಗಿರೀಶ್ ಆಳ್ವ, ಚಂದ್ರಹಾಸ್ ಸನಿಲ್, ಅಬ್ದುಲ್ ರವೂಫ್, ಮೆರಿಲ್ ರೆಗೊ, ಪ್ರಶಾಂತ್, ತೌಸೀಫ್, ಅಬೂಬಕರ್ ಸಿದ್ದೀಕ್ ಹಾಗೂ ಯುವ ಕಾಂಗ್ರೆಸ್ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು ವಂದಿಸಿದರು.