ಜೂ.7: ಮೋದಿ ಸಾಧನೆಯ ಸಮಾವೇಶ
ಮಂಗಳೂರು, ಜೂ.1: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೂರು ವರ್ಷದ ಸಾಧನೆಗಳನ್ನು ಜನರಿಗೆ ತಲುಪಿಸಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಕಮಲ ಅರಳಿಸಲು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಸಮಾವೇಶ ರಾಜ್ಯದ 33 ಕಡೆಗಳಲ್ಲಿ ನಡೆಯಲಿದ್ದು, ಜೂ.7ರಂದು ಪೂ.11ಕ್ಕೆ ನಗರದ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಪಿ.ಪಿ. ಚೌದರಿ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಬಹುಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಹಾಗೂ ಹಲ್ಲೆಗಳು ಸಾಮಾನ್ಯವಾಗಿದೆ. ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸೈದ್ಧಾಂತಿಕ ಹಲ್ಲೆ ಹಾಗೂ ಹತ್ಯೆಗಳು ಪೈಪೋಟಿಯಲ್ಲಿ ಜರಗುತ್ತಿದೆ. ಬಿಜೆಪಿಯ ಎಸ್ಸಿ ಮೋರ್ಚಾದ ಉಪಾಧ್ಯಕ್ಷ ಎಸ್. ಹರೀಶ್‌ರನ್ನು ಬೆಂಗಳೂರಿನ ಆನೆಕಲ್ ತಾಲೂಕಿನಲ್ಲಿ ಆಮಾನುಷವಾಗಿ ಕೊಂದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಜಿಲ್ಲೆಯಲ್ಲೂ ಈ ತಾರತಮ್ಯವು ತಾರಕಕ್ಕೇರಿದೆ. ಜಿಲ್ಲೆಯ ಪೊಲೀಸರು ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಾಗಿದ್ದಾರೆ. ಕರೋಪಾಡಿ ಗ್ರಾಪಂ ಉಪಾಧ್ಯಕ್ಷರ ಹತ್ಯೆಯ ತನಿಖೆಯ ನೆಪ ಒಡ್ಡಿ ಅಮಾಯಕರಿಗೆ ತೊಂದರೆ ಕೊಡಲಾಗುತ್ತಿದೆ. ಕಲ್ಲಡ್ಕದಲ್ಲಿ ನಡೆದ ಪ್ರಕರಣವನ್ನು ತಿರುಚಲಾಗುತ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಕಾರಣವಾಗಿದೆ ಎಂದು ಸಂಜೀವ ಮಠಂದೂರು ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕಿಶೋರ್ ರೈ, ವೇದವ್ಯಾಸ ಕಾಮತ್, ವಿಕಾಸ್ ಪುತ್ತೂರು, ಜಿತೇಂದ್ರ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.