ಆಗ್ನೆಸ್ ಕಾಲೇಜ್ ಬಳಿಯ ಬಸ್ ಹಾಗೂ ಆಟೊರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸದಿರಲು ಮನವಿ
ಮಂಗಳೂರು, ಜೂ.1: ನಗರದ ಸಂತ ಆಗ್ನೆಸ್ ಕಾಲೇಜ್ ಮುಂಭಾಗದಲ್ಲಿರುವ ಬಸ್ ನಿಲ್ದಾಣವನ್ನು ತೆರವುಗೊಳಿಸಿದ್ದು ತೀರಾ ಅನ್ಯಾಯವಾಗಿದೆ. ಅದನ್ನು ಕೂಡಲೇ ಮರು ಸ್ಥಾಪಿಸಬೇಕು ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ಮನಪಾವನ್ನು ಒತ್ತಾತಿಸಿದೆ.
ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ಪಕ್ಷದ ನಿಯೋಗವೊಂದು ಮನಪಾ ಆಯುಕ್ತರನ್ನು ಭೇಟಿಯಾಗಿ ಆಗ್ನೆಸ್ ಕಾಲೇಜ್ ಜಂಕ್ಷನ್ ಸುತ್ತಮುತ್ತ ಸಾವಿರಾರು ವಿದ್ಯಾರ್ಥಿಗಳಿದ್ದು, ಹಲವಾರು ವರ್ಷಗಳಿಂದ ಅಲ್ಲೇ ಪಕ್ಕದಲ್ಲಿದ್ದ ಬಸ್ ನಿಲ್ದಾಣವನ್ನು ಅವಲಂಭಿಸಿದ್ದರು. ಅಲ್ಲದೆ ಈ ಪ್ರದೇಶದ ಸಾರ್ವಜನಿಕರಿಗೆ ಕೂಡ ಅನುಕೂಲವಾಗಿತ್ತು. ಇತ್ತೀಚೆಗೆ ಏಕಾಏಕಿಯಾಗಿ ವಿನಾಕಾರಣ ಅಲ್ಲಿನ ಬಸ್‌ನಿಲ್ದಾಣವನ್ನು ತೆರವುಗೊಳಿಸಿದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ.
ಇದೀಗ ಪಕ್ಕದಲ್ಲಿರುವ ಆಟೋರಿಕ್ಷಾ ನಿಲ್ದಾಣವನ್ನು ಕೂಡಾ ತೆರವುಗೊಳಿಸುವ ಬಗ್ಗೆ ಹುನ್ನಾರ ನಡೆಯುತ್ತಿದೆ. ಶಾಲಾ-ಕಾಲೇಜು ಪರಿಸರದಲ್ಲಿರುವ ಈ ಜಂಕ್ಷನ್‌ನಲ್ಲಿ ಆಟೋರಿಕ್ಷಾ ನಿಲ್ದಾಣ ಅಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ತೆರವು ಕಾರ್ಯ ನಡೆಯುತ್ತಿರುವುದು ತೀರಾ ಖಂಡನೀಯವಾಗಿದೆ ಎಂದು ಹೇಳಿರುವ ಸಿಪಿಎಂ ಯಾವುದೇ ಕಾರಣಕ್ಕೂ ಬಸ್ ಹಾಗೂ ರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.
ನಿಯೋಗದಲ್ಲಿ ಸಿಪಿಎಂ ನಗರ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ ಮತ್ತಿತರರು ಉಪಸ್ಥಿತರಿದ್ದರು.