×
Ad

ಉಳ್ಳಾಲದಲ್ಲಿ ಆಧಾರ್ ಕೇಂದ್ರ ಶೀಘ್ರ ಆರಂಭ: ಯು.ಟಿ.ಖಾದರ್

Update: 2017-06-01 20:27 IST

ಮಂಗಳೂರು, ಜೂ.1: ಗ್ರಾಪಂಗಳು ರಸ್ತೆ, ಚರಂಡಿ ನಿರ್ಮಾಣದ ಜೊತೆ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಮಾಡಿಸುವುದು ಗ್ರಾಮಾಭಿವೃದ್ಧಿಯ ಸಂಕೇತ, ಈ ನಿಟ್ಟಿನಲ್ಲಿ ಉಳ್ಳಾಲ ವ್ಯಾಪ್ತಿಯಲ್ಲಿ ಐದು ಕಡೆ ಆಧಾರ್ ಕೇಂದ್ರಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ತೊಕ್ಕೊಟ್ಟು ಸಮೀಪದ ಖಾಸಗಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರದ ನಾಲ್ಕು ವರ್ಷಗಳ ಅವಧಿಯ ಆಡಳಿತದಲ್ಲಿ ನಾಡಿನ ಜನರ ಗೌರವಕ್ಕೆ ಯಾವುದೇ ರೀತಿಯ ಕಪ್ಪುಚುಕ್ಕೆ ಬರದಂತೆ ಕಾರ್ಯನಿರ್ವಹಿಸಿದೆ. ಎಲ್ಲಾ ವರ್ಗದ ಜನರಿಗೂ ವಿವಿಧ ಸವಲತ್ತುಗಳನ್ನು ಜಾರಿಗೆ ತಂದಿದ್ದು ಪ್ರಯೋಜನ ಪಡೆಯುವ ಮನೋಭಾವ ಎಲ್ಲರಲ್ಲಿಬೇಕು, ಮಾಸಿಕ ಪಿಂಚಣಿ ಸಹಿತ ಜನಸಾಮಾನ್ಯರ ದೂರು ಆಲಿಸುವ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿ ದೂರು ಕೇಂದ್ರ ಆರಂಭಿಸುವಂತೆ ತಹಸೀಲ್ದಾರ್‌ಗೆ ಸೂಚಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿ 186 ಫಲಾನುಭವಿಗಳಿಗೆ 37,60,000 ರೂ. ಹಾಗೂ ಅಂತ್ಯ ಸಂಸ್ಕಾರ ಸಹಾಯಧನವಾಗಿ 100 ಫಲಾನುಭವಿಗಳಿಗೆ 2,22,000 ರೂ. ಮೊತ್ತದ ಚೆಕ್ ವಿತರಿಸಲಾಯಿತು.
 ಜಿಪಂ ಸದಸ್ಯೆ ರಶೀದಾ ಬಾನು, ತಾಪಂ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಸುರೇಖ ಚಂದ್ರಹಾಸ್, ಅಬ್ದುಲ್ ಜಬ್ಬಾರ್ ಬೋಳಿಯಾರ್, ಪದ್ಮಾವತಿ ಪೂಜಾರಿ, ಶಶಿಪ್ರಭಾ ಶೆಟ್ಟಿ, ವಿಲ್ಮಾ ವಿಲ್ಫ್ರೆಡ್, ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಉಪಾಧ್ಯಕ್ಷೆ ಚಿತ್ರಕಲಾ, ಸ್ಥಾಯಿ ಸಮಿತಿಯ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ತಹಶೀಲ್ದಾರ್ ಮಹಾದೇವಯ್ಯ, ಪಾವೂರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ಫಿರೋಝ್, ಅಂಬ್ಲಮೊಗರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ರಫೀಕ್, ಹರೇಕಳ ಗ್ರಾಪಂ ಅಧ್ಯಕ್ಷೆ ಅನಿತಾ ಡಿಸೋಜ, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಬಿ.ಎಂ.ಅಬ್ದುಲ್ ಸತ್ತಾರ್, ಬೋಳಿಯಾರ್ ಗ್ರಾಪಂ ಅಧ್ಯಕ್ಷ ಸತೀಶ್ ಆಚಾರ್ಯ, ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ, ಎಪಿಎಂಸಿ ಉಪಾಧ್ಯಕ್ಷೆ ಮುತ್ತು ಶೆಟ್ಟಿ, ಕೆಎಸ್ಸಾರ್ಟಿಸಿ ನಿರ್ದೇಶಕ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.

ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾನಂದ ವಂದಿಸಿದರು.

ಸಭಾಂಗಣ ಖಾಲಿ!
ಜನರ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ನೇರವಾಗಿ ತಿಳಿಯುವ ಉದ್ದೇಶದಿಂದ ತಾಲೂಕು ಮಟ್ಟದ ಜನಸಂಪರ್ಕ ಸಭೆಯ ಆರಂಭದಲ್ಲೇ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗಿದ್ದು, ಚೆಕ್ ಪಡೆದವರು ಸ್ಥಳದಿಂದ ನಿರ್ಗಮಿಸಿದರು. ಇದರಿಂದಾಗಿ ಸಭಾಂಗಣ ಬಹುತೇಕ ಖಾಲಿಯಾಗಿತ್ತು. ಅರಣ್ಯ, ಕೃಷಿ, ಆಯುಶ್, ಆರೋಗ್ಯ, ಅಲ್ಪಸಂಖ್ಯಾತ ಇಲಾಖೆಗಳ ಸಹಿತ ಒಂದಿಬ್ಬರು ಅಧಿಕಾರಿಗಳು ಮಾಹಿತಿ ನೀಡಿದರೂ ಅದನ್ನು ಕೇಳಿಸಿಕೊಳ್ಳಲು ಜನರಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News