×
Ad

ಕುಮಾರಧಾರಾ ನದಿ ದಾಟುತ್ತಿದ್ದ ವೇಳೆ ದಂಪತಿ ನೀರುಪಾಲು

Update: 2017-06-01 20:59 IST

ಪುತ್ತೂರು, ಜೂ.1  ನದಿ ದಾಟುತ್ತಿದ್ದ ವೇಳೆ ದಂಪತಿ ನೀರು ಪಾಲಾದ ಘಟನೆ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಐರಳ ಎಂಬಲ್ಲಿ ಗುರುವಾರ ನಡೆದಿದೆ.

ಚಾರ್ವಾಕ ಗ್ರಾಮದ ಕುಂಬ್ಲಾಡಿ ಪರಮೇಶ್ವರ ಗೌಡ (56) ಹಾಗೂ ಭವಾನಿ (55) ನೀರು ಪಾಲಾದವರು ಎಂದು ಗುರುತಿಸಲಾಗಿದೆ.

ಕುಂತೂರು ಗ್ರಾಮದ ಎರ್ಮಳ್ ಎಂಬಲ್ಲಿಗೆ ಮದುವೆಗೆ ತೆರಳಿದ್ದ ಈ ದಂಪತಿ ಅಲ್ಲಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕುಮಾರಧಾರಾ ಹೊಳೆ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಗುರುವಾರ ಮಧ್ನಾಹ  ದಂಪತಿಯ ಮೃತದೇಹಗಳು ಪತ್ತೆಯಾಗಿವೆ. ಬುಧವಾರ ಬೆಳಗ್ಗೆ ಶಾಂತಿಮೊಗರು ಮೂಲಕ ಪೆರಾಬೆಗೆ ಮದುವೆ ಕಾರ್ಯ ನಿಮಿತ್ತ ಪರಮೇಶ್ವರ ಹಾಗೂ ಭವಾನಿ ತೆರಳಿದ್ದು ಮದುವೆ ಕಾರ್ಯಕ್ರಮ ಮುಗಿಸಿ ಕುಂತೂರು, ಕುಂಬ್ಲಾಡಿ ಸಂಪರ್ಕಿಸುವ ಐರಳ ಮೂಲಕ ಕುಮಾರಾಧಾರಾ ನದಿ ದಾಟಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ. 

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಇಲ್ಲಿಂದ ನದಿ ದಾಟಲು ಸಾಧ್ಯವಾಗುತ್ತದೆಯಾದರೂ ಕಳೆದ ನಾಲ್ಕು ದಿನಗಳಿಂದ ಮಳೆ ಸುರಿದ ಕಾರಣ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಮತ್ತು ಗುಂಡ್ಯದಲ್ಲಿರುವ ಗೇಟ್‌ನಿಂದ ಹೆಚ್ಚುವರಿ ನೀರನ್ನು ಹೊರಬಿಟ್ಟಿರುವುದು ಅವಘಡ ಸಂಭವಿಸಲು ಕಾರಣವಾಗಿರಬಹುದೆಂದು ಸ್ಥಳೀಯರು ತಿಳಿಸಿದ್ದಾರೆ.

ಪರಮೇಶ್ವರ್ ದಂಪತಿ ನೀರಿನಲ್ಲಿ ಮುಳುಗಿರುವ ನಿಖರ ಮಾಹಿತಿ ಯಾರಿಗೂ ಇರಲಿಲ್ಲ. ಕುಂತೂರಿನಿಂದ ನದಿ ಮಾರ್ಗವಾಗಿ ಅವರು ಸಾಗುತ್ತಿದ್ದರು ಎಂದು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹುಡುಗಾಟ ನಡೆದಿದೆ. ಈ ಸಂದರ್ಭ ಚಪ್ಪಲಿಯೊಂದು ನದಿ ನೀರಿನಲ್ಲಿ ತೇಳಾಡುತ್ತಿರುವುದು ಪತ್ತೆಯಾಗಿದ್ದು, ಆ ಚಪ್ಪಲಿ ಪರಮೇಶ್ವರ್‌ ರದ್ದು ಎಂದು ಅವರ ನೆರೆಮನೆಯವರು ತಿಳಿಸಿದ್ದರು. ಇದು ಪರಮೇಶ್ವರ್ ದಂಪತಿ ನೀರಲ್ಲಿ ಮುಳುಗಿರುವುದನ್ನ ಖಚಿತ ಪಡಿಸಿತ್ತು.

ತಣ್ಣೀರುಬಾವಿ ತಂಡದಿಂದ ಕಾರ್ಯಾಚರಣೆ

ಗುರುವಾರ ಬೆಳಗ್ಗೆಯೇ ಮಂಗಳೂರು ತಣ್ಣೀರು ಬಾವಿ ಮುಳುಗು ತಜ್ಙರ ತಂಡ ಸ್ಥಳಕ್ಕಾಗಮಿಸಿ ನೀರಿನಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಿತ್ತು. ತೀವ್ರ ಕಾರ್ಯಾಚರಣೆ ನಡೆಸಿದ ತಣ್ಣೀರುಬಾವಿ ತಂಡ ಮಧ್ಯಾಹ್ನದ ವೇಳೆಗೆ ಪರಮೇಶ್ವರ್ ಹಾಗೂ ಭವಾನಿಯವರ ಮೃತದೇಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.

ಅಗ್ನಿಶಾಮಕ ದಳ ಸಿಬ್ಬಂದಿಯೂ ಇವರಿಗೆ ಸಾಥ್ ನೀಡಿದ್ದರು. ಘಟನಾ ಸ್ಥಳಕ್ಕೆ ಕಡಬ ಠಾಣಾ ಎಎಸ್‌ಐ ರವಿ ಎಂ.ಕೆ., ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಕಾಣಿಯೂರು ಗ್ರಾಪಂ ಅಧ್ಯಕ್ಷೆ ಸೀತಮ್ಮ ಖಂಡಿಗ, ರಾಮಕುಂಜ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಆರ್.ಕೆ., ಗ್ರಾಮಕರಣಿಕ ಪುಷ್ಪರಾಜ್, ಗಣೇಶ್ ಉದನಡ್ಕ, ಎ.ಪಿ. ಮೋಹನ್ ಮೊದಲಾದವರು ಆಗಮಿಸಿ, ಮೃತ ದೇಹ ಪತ್ತೆ ಹಚ್ಚುವಲ್ಲಿ ಸಹಕರಿಸಿದ್ದರು.

ಹಲವು ಮಂದಿ ಮೃತ್ಯು
ಚಾರ್ವಾಕ ಗ್ರಾಮದ ಸಮೀಪ ಕುಮಾರಧಾರಾ ನದಿ ನೀರಿನಲ್ಲಿ ಮುಳುಗಿ ಹಲವು ಮಂದಿ ಮೃತಪಟ್ಟಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಪರಿಸರದಲ್ಲಿ ತೆಪ್ಪ ಮುಳುಗಿ ಕುಂಞಣ್ಣ ಹಾಗೂ ಗಣೇಶ್ ಎಂಬವರು ಮೃತಪಟ್ಟಿದ್ದರು. ಹಲವು ವರ್ಷಗಳ ಹಿಂದೆ ಕಾಂಗ್ರೆಸ್ ಮುಖಂಡ ಸಿ.ಪಿ. ಜಯರಾಮ ಗೌಡರ ಪುತ್ರ ವಿಶ್ವಾಸ್ ಅರುವ ಹಾಗೂ ಅವರ ಸಂಬಂಧಿಕರೊಬ್ಬರು ಇದೇ ಸ್ಥಳದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಸ್ಥಳೀಯರಾದ ರಾಮಣ್ಣ ಗೌಡ ಹಾಗೂ ಮಹಿಳೆಯರಿಬ್ಬರೂ ಮುಳುಗಿ ಅಸುನೀಗಿದ್ದಾರೆ ಸ್ಥಳೀಯರಾದ ಸಂಕಪ್ಪ ಗೌಡ ಇಲ್ಲಿ ನದಿ ದಾಟುತ್ತಿದ್ದ ವೇಳೆಯೇ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದರು.

ಫೋಟೋ: 1ಪಿಟಿಆರ್-ಪರಮೇಶ್ವರ್, 1ಪಿಟಿಆರ್- ಭವಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News