ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ
ಮುಲ್ಕಿ, ಜೂ.1: ಹಾಡು ಹಗಲೇ ಮನುಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನ್ನಾಭರಣ ದರೋಡೆ ಮಾಡಿದ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಸಮೀಪದ ಕೊಯಿಕುಡೆಯಲ್ಲಿ ನಡೆದಿದೆ.
ಕೊಯಿಕುಡೆ ನಿವಾಸಿ ಕುಪ್ಪ ಸ್ವಾಮಿ ಎಂಬವರ ಪತ್ನಿ ಕಾವೇರಮ್ಮ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಇಬ್ಬರು ಅಪರಿಚಿತರು ಬಂದು ಕಾವೇರಮ್ಮ ಬಳಿ ಕುಪ್ಪಸ್ವಾಮಿಯನ್ನು ಕೇಳಿದ್ದು, ಕಾವೇರಮ್ಮ ಬಾಗಿಲು ತೆಗೆದ ಕೂಡಲೇ ಎರಡು ಮಂದಿ ಒಳ ನುಗ್ಗಿ ಕಾವೇರಮ್ಮರ ಬಾಯಿಗೆ ಬಟ್ಟೆಯನ್ನು ತುರುಕಿ, ಕೈಕಾಲನ್ನು ಕಟ್ಟಿ ಕಾವೇರಮ್ಮರ ಕುತ್ತಿಗೆಯಲ್ಲಿದ್ದ ಸುಮಾರು 23 ಪವನ್ ತೂಕದ ಮೂರು ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ಅರಿತ ಸ್ಥಳೀಯ ನಿವಾಸಿಗಳಾದ ದಿನೇಶ್ ಹರಿಪಾದೆ ಮತ್ತು ಸಂಗಡಿಗರು ಗಾಯಗೊಂಡ ಕಾವೇರಮ್ಮರಿಗೆ ಪ್ರಥಮ ಚಿಕಿತ್ಸೆ ನೀಡಿ, ಮುಲ್ಕಿ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಡಿಸಿಪಿ ಸಜೀವ್ ಪಾಟೀಲ್, ಎಸಿಪಿ ರಾಜೇಂದ್ರ, ಮುಲ್ಕಿ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.