×
Ad

ಜೂ.3: ಸ್ವಘೋಷಿತ ಸ್ವಾಮೀಜಿ ವಿರುದ್ಧ ಬ್ರಹ್ಮಾವರದಲ್ಲಿ ಪ್ರತಿಭಟನೆ

Update: 2017-06-01 22:28 IST

ಉಡುಪಿ, ಜೂ.1: ಸ್ವಘೋಷಿತ ಸ್ವಾಮೀಜಿಯೊಬ್ಬರು ಇತ್ತೀಚೆಗೆ ಬಂಟರ ಕುಲಗುರು ಎಂಬಂತೆ ತನ್ನನ್ನು ಬಿಂಬಿಸಿಕೊಳ್ಳಲು ನಡೆಸಿದ ಪ್ರಯತ್ನವನ್ನು ಖಂಡಿಸಿ, ಅಭಿವ್ಯಕ್ತ ಸ್ವಾತಂತ್ರದ ಆಧಾರದಲ್ಲಿ ಅದನ್ನು ಪ್ರಶ್ನಿಸಿದ್ದನ್ನು ಸಹಿಸದೇ ಬಂಟ ಸಮುದಾಯದ ಐವರು ಸಾಮಾಜಿಕ ಚಿಂತಕರ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರನ್ನು ದಾಖಲಿಸಿ ವ್ಯಕ್ತಿ ಸ್ವಾತಂತ್ರವನ್ನು ಧಮನಿಸಲು ನಡೆಸುತ್ತಿರುವ ಪ್ರಯತ್ನವನ್ನು ಖಂಡಿಸಿ ಬೆಂಗಳೂರಿನ ವಿಶ್ವ ಬಂಟರ ಯಾನೆ ನಾಡವರ ಜನಜಾಗೃತಿ ಬಳಗ ಜೂ. 3ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಬಳಗದ ಅಧ್ಯಕ್ಷ ಎ.ಎನ್.ಶೆಟ್ಟಿ ಹೇಳಿದ್ದಾರೆ.
 

ಉಡುಪಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಐತಿಹಾಸಿಕ ಪ್ರಸಿದ್ಧಿ ಬಾರಕೂರಿನಲ್ಲಿ ಬಂಟರ ಮಹಾಸಂಸ್ಥಾನ ಎಂಬ ಹೆಸರಿನಲ್ಲಿ ಆಶ್ರಮವೊಂದನ್ನು ಸ್ಥಾಪಿಸಲು ಇದೇ ವ್ಯಕ್ತಿ ಮುಂದಾದಾಗ ಬೆಂಗಳೂರಿನ ಬಂಟರ ಬಳಗ ಅದನ್ನು ತೀವ್ರವಾಗಿ ಖಂಡಿಸಿತ್ತು ಎಂದವರು ಹೇಳಿದರು.

ಇದರ ಹಿನ್ನೆಲೆಯಲ್ಲಿ ಬಂಟ ಪೀಠದ ಹೆಸರನ್ನು ಕೈಬಿಟ್ಟು ‘ಬಾರಕೂರು ಮಹಾಸಂಸ್ಥಾನ ಭಾಗರ್ವ ಬೀಡು’ ಎನ್ನುವ ಹೆಸರಿನಲ್ಲಿ ಬಾರಕೂರಿನಲ್ಲಿ ಕಟ್ಟಡ ನಿರ್ಮಿಸಿ ಮುಂದೆ ತನ್ನನ್ನು ಬಂಟರ ಕುಲಗುರು ಎಂಬಂತೆ ಬಿಂಬಿಸಲು ಹೊರಟ ಕ್ರಮವನ್ನು ನಾವು ಖಂಡಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ತೀವ್ರವಾದ ಪ್ರತಿರೋಧ ಒಡ್ಡಿದ್ದೇವೆ ಎಂದರು.

ನಮ್ಮ ಸೈದ್ಧಾಂತಿಕ ಹೋರಾಟವನ್ನು ಎದುರಿಸಲಾರದೇ ಈ ಸ್ವಘೋಷಿತ ಸ್ವಾಮೀಜಿ ತನ್ನ ಚೇಲಾರ ಮೂಲಕ ಸುಳ್ಳು ಕೇಸನ್ನು ದಾಖಲಿಸಿ, ಇವರ ಪೀಠವನ್ನು ವಿರೋಧಿಸುತ್ತಿರುವವನ್ನು ಹೋರಾಟದಿಂದ ವಿಮುಖಗೊಳಿಸಲು ಪ್ರಯತ್ನಿಸುತಿದ್ದಾರೆ ಎಂದವರು ಆರೋಪಿಸಿದರು.

ಅಳಿಯಸಂತಾನ ಕಟ್ಟು ಪರಂಪರೆಯನ್ನು ಅನುಸರಿಸುತ್ತಿರುವ ಬಂಟರಿಗೆ ಯಾವುದೇ ಗುರುಪೀಠವಾಗಲೀ, ಧರ್ಮಗುರುವಿನ ಅಗತ್ಯ ಈವರೆಗೆ ಇರಲಿಲ್ಲ. ಇನ್ನೂ ಬೇಕಿಲ್ಲ ಎಂಬುದು ಬಂಟ ಸಮುದಾಯದ ಬಹುಸಂಖ್ಯಾತರ ಅಭಿಪ್ರಾಯವಾಗಿದೆ. ಈ ದೇಶಾದ್ಯಂತ ಹಾಗೂ ವಿದೇಶಗಳಲ್ಲೂ ಇರುವ 110ಕ್ಕೂ ಅಧಿಕ ಬಂಟರ ಯಾನೆ ನಾಡವರ ಸಂಘಗಳಲ್ಲಿ ಯಾವುದೂ ತಮಗೆ ಗುರುಪೀಠ ಹಾಗೂ ಸ್ವಾಮೀಜಿಯ ಅಗತ್ಯವನ್ನು ಹೇಳಿಲ್ಲ. ಕೆಲವೇ ಕೆಲವರು ವೈಯಕ್ತಿಕ ಹಿತಾಸಕ್ತಿಗಾಗಿ ಸ್ವಘೋಷಿತ ಸ್ವಾಮೀಜಿಯ ಹುನ್ನಾರಕ್ಕೆ ಬಲಿಯಾಗಿದ್ದಾರೆ ಎಂದು ಬಳಗದ ಸದಸ್ಯರು ಹೇಳಿದರು.
 

ಸದಾ ವಿವಾದಗ್ರಸ್ತರಾದ, ಸ್ವಘೋಷಿತ ಸ್ವಾಮಿಜಿ, ಲೌಕಿಕ ಬದುಕಿನ ಎಲ್ಲಾ ಸುಖ ಭೋಗಗಳೊಂದಿಗೆ ಬದುಕುತಿದ್ದು, ಕರಾವಳಿ ಜಿಲ್ಲೆಯ ಧಾರ್ಮಿಕ ಮತ್ತು ಸಂಸ್ಕಾರದ ನಡಾವಳಿಯನ್ನೇ ಬುಡಮೇಲು ಮಾಡುವ ಹುನ್ನಾರದೊಂದಿಗೆ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ಸೈದ್ಧಾಂತಿಕವಾಗಿ ಹಾಗೂ ತಾರ್ಕಿಕವಾಗಿ ನಾವು ವಿರೋಧಿಸುತಿದ್ದೇವೆ.

ನಮ್ಮ ವ್ಯಕ್ತಿ ಸ್ವಾತಂತ್ರವನ್ನು ಧಮನ ಮಾಡಲು ಹೊರಟ ಕ್ರಮವನ್ನು ಖಂಡಿಸಿ, ಬಂಟ ಸಮುದಾಯದ ಹಿರಿಯರ, ಚಿಂತಕರ ಹಾಗೂ ಸಮಾನ ಮನಸ್ಕರ ಜೊತೆ ಸೇರಿ ಜೂ.3ರ ಅಪರಾಹ್ನ 3 ಗಂಟೆಗೆ ಬ್ರಹ್ಮಾವರ ಬಂಟರ ಭವನದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎ.ಎನ್.ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಳಗದ ಸಂಚಾಲಕ ಎಂ.ಚಂದ್ರಶೇಖರ ಹೆಗ್ಡೆ, ಉಪಾಧ್ಯಕ್ಷ ಅನಗಳ್ಳಿ ಕರುಣಾಕರ ಹೆಗ್ಡೆ, ಕಾನೂನು ಸಲಹೆಗಾರರಾದ ಕೃಷ್ಣರಾಜ ಶೆಟ್ಟಿ ಚೋರಾಡಿ, ಬ್ರಹ್ಮಾವರ ಬಂಟರ ಸಂಘದ ಉಪಾಧ್ಯಕ್ಷ ಆರೂರು ತಿಮ್ಮಪ್ಪ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News