ಶೀಘ್ರ ಯಕ್ಷಗಾನ, ಬಯಲಾಟಗಳಿಗೆ ಪ್ರತ್ಯೇಕ ಅಕಾಡೆಮಿ: ಕಿಶನ್ ಹೆಗ್ಡೆ

Update: 2017-06-01 18:01 GMT

ಉಡುಪಿ, ಜೂ.1: ಕರಾವಳಿ ಮತ್ತು ಉತ್ತರ ಕರ್ನಾಟಕದ ಜನಪ್ರಿಯ ಕಲಾಪ್ರಕಾರಗಳಾದ ಯಕ್ಷಗಾನ ಮತ್ತು ಬಯಲಾಟಗಳಿಗೆ ಈವರೆಗೆ ಇದ್ದ ಒಂದೇ ಅಕಾಡೆಮಿ ಶೀಘ್ರದಲ್ಲೇ ಯಕ್ಷಗಾನ ಮತ್ತು ಬಯಲಾಟ ಎನ್ನುವ ಎರಡು ಪ್ರತ್ಯೇಕ ಅಕಾಡೆಮಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ಹಾಗೂ ಯಕ್ಷಗಾನ ಮೇಳಗಳ ಮಾಲಕ ಪಿ.ಕಿಶನ್ ಹೆಗ್ಡೆ ಹೇಳಿದ್ದಾರೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಗುರುವಾರ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ನಡೆದ ಯಕ್ಷ ಕಲಾವಿದರ ಸಾಕ್ಷಚಿತ್ರ ಬಿಡುಗಡೆ ಹಾಗೂ ಯಕ್ಷಗಾನ ಪ್ರಸಂಗ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇದಕ್ಕೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಿ ಅಗತ್ಯ ಕಾರ್ಯಗಳು ನಡೆಯುತಿದ್ದು, ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಯಕ್ಷಗಾನಕ್ಕೆ ಪ್ರತ್ಯೇಕವಾದ ಅಕಾಡೆಮಿ ಪ್ರಾರಂಭಗೊಂಡಾಗ ಹೆಚ್ಚಿನ ಅನುದಾನಗಳು ಯಕ್ಷಗಾನಕ್ಕೆ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಅಕಾಡೆಮಿಯ ಮೂಲಕ ಸುಮಾರು 100ಕ್ಕೂ ಅಧಿಕ ತೆಂಕು, ಬಡಗುತಿಟ್ಟಿನ ಕಲಾವಿದರ ವೇಷ, ಭಾಗವತಿಕೆ, ನೃತ್ಯಗಳ ಸಾಕ್ಷಚಿತ್ರಗಳನ್ನು ತಯಾರಿಸಿ ದಾಖಲೀಕರಣ ಮಾಡಲಾಗಿದೆ. ಅನ್ಯ ಜಿಲ್ಲೆ ಹಾಗೂ ರಾಜ್ಯಗಳ ಜೊತೆಗೆ ಸಾಂಸ್ಕೃತಿಕ ವಿನಿಮಯವನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದವರು ವಿವರಿಸಿದರು.

ಖ್ಯಾತ ಕಲಾ ವಿಮರ್ಶಕ ಹಾಗೂ ಹಿರಿಯ ಪತ್ರಕರ್ತ ಎ.ಈಶ್ವರಯ್ಯ ಮಾತನಾಡಿ, ಕಲೆಯಲ್ಲಿ ಪ್ರಯೋಗಾತ್ಮಕ ಹೆಜ್ಜೆ ಇಡಬೇಕಾದರೆ ದಾಖಲೀಕರಣ ಅಗತ್ಯವಾಗಿ ಆಗಬೇಕಾಗಿದೆ. ಹಿಂದಿನ ಕಾಲದಲ್ಲಿ ಸಮಕಾಲೀನರು ಸಾಧಕರ ಬಗ್ಗೆ ದಾಖಲೀಕರಣ ಮಾಡಿಕೊಳ್ಳದ ಕಾರಣ ಪರಿಣಾಮಕಾರಿ ಹೆಜ್ಜೆ ತಪ್ಪಿ ಹೋಗಿದೆ. ಕಲೆಯ ವಿಕಾಸವನ್ನು ಸಮಗ್ರವಾಗಿ ಕಲೆ ಹಾಕಲು, ಮುಂದಿನ ಪೀಳಿಗೆಗೆ ಅರ್ಥೈಸಲು ಸಾಕ್ಷಚಿತ್ರಗಳ ದಾಖಲೀಕರಣದಿಂದ ಮಾತ್ರ ಸಾಧ್ಯ ಎಂದರು.

ಖ್ಯಾತ ಕಲಾ ವಿಮರ್ಶಕ ಹಾಗೂ ಹಿರಿಯ ಪತ್ರಕರ್ತ ಎ.ಈಶ್ವರಯ್ಯ ಮಾತನಾಡಿ, ಕಲೆಯಲ್ಲಿ ಪ್ರಯೋಗಾತ್ಮಕ ಹೆಜ್ಜೆ ಇಡಬೇಕಾದರೆ ದಾಖಲೀಕರಣ ಅಗತ್ಯವಾಗಿ ಆಗಬೇಕಾಗಿದೆ. ಹಿಂದಿನ ಕಾಲದಲ್ಲಿ ಸಮಕಾಲೀನರು ಸಾಕರ ಬಗ್ಗೆ ದಾಖಲೀಕರಣ ಮಾಡಿಕೊಳ್ಳದ ಕಾರಣ ಪರಿಣಾಮಕಾರಿ ಹೆಜ್ಜೆ ತಪ್ಪಿಹೋಗಿದೆ. ಕಲೆಯ ವಿಕಾಸವನ್ನು ಸಮಗ್ರವಾಗಿ ಕಲೆ ಹಾಕಲು, ಮುಂದಿನ ಪೀಳಿಗೆಗೆ ಅರ್ಥೈಸಲು ಸಾಕ್ಷಚಿತ್ರಗಳ ದಾಖಲೀಕರಣದಿಂದ ಮಾತ್ರ ಸಾಧ್ಯ ಎಂದರು.

ಯಕ್ಷಗಾನದ ಹಿರಿಯ ಕಲಾವಿದರಾದ ಹಿರಿಯಡ್ಕ ಗೋಪಾಲ ರಾವ್, ಕೊಳ್ಯೂರು ರಾಮಚಂದ್ರ ರಾವ್, ಕೆ.ಗೋವಿಂದ ಭಟ್, ಪೇತ್ರಿ ಮಾಧವ ನಾಯ್ಕಿ, ಲೀಲಾವತಿ ಬೈಪಡಿತ್ತಾಯ ಅವರ ಕುರಿತ ಸಾಕ್ಷಚಿತ್ರಗಳ ಧ್ವನಿಮುದ್ರಿಕೆಗಳನ್ನು ಈ ಕಲಾವಿದರ ಉಪಸ್ಥಿತಿಯಲ್ಲೇ ಕಲಾವಿಮರ್ಶಕ ಎ. ಈಶ್ವರಯ್ಯ ಬಿಡುಗಡೆ ಮಾಡಿದರು.

ದಿ. ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ರಚಿಸಿದ ‘ವರ್ಣ ವೈಷಮ್ಯ’ ಕೃತಿಯನ್ನು ಖ್ಯಾತ ವೈದ್ಯ ಹಾಗೂ ತುಳುಕೂಟ ಉಡುಪಿ ಅಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ಈ ಬಾರಿಯ ಕೇಂದ್ರ ಅಕಾಡೆಮಿ ಪ್ರಶಸ್ತಿ ಪಡೆದ ತೆಂಕುತಿಟ್ಟಿನ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಅವರನ್ನು ಆತ್ಮೀಯ ವಾಗಿ ಸನ್ಮಾನಿಸಲಾಯಿತು. ಕಲಾವಿದ ಸದಾಶಿವ ಶೆಟ್ಟಿ, ರಾಮಮೂರ್ತಿ, ಹೆರಂಜೆ ಕೃಷ್ಣ ಭಟ್ ಉಪಸ್ಥಿತರಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಸ್ವಾಗತಿಸಿದರೆ, ಯಕ್ಷ ಕಲಾವಿದ, ಪ್ರಸಂಗಕರ್ತ ಹಾಗೂ ಸಾಹಿತಿ ಅಂಬಾತನಯ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News