×
Ad

ಬಾವುಟ ಗುಡ್ಡೆ ಮಸೀದಿ ಪಕ್ಕದಲ್ಲಿ ಶೌಚಾಲಯಕ್ಕೆ ವಿರೋಧ

Update: 2017-06-02 20:02 IST

ಮಂಗಳೂರು, ಜೂ. 3: ನಗರದ ಬಾವುಟಗುಡ್ಡೆ ಮಸೀದಿ ಹತ್ತಿರದಲ್ಲಿ ಮುಖ್ಯಮಂತ್ರಿಯವರ ವಿಶೇಷ ನಿಧಿಯಿಂದ ನಿರ್ಮಾಣವಾಗಲಿರುವ ಶೌಚಾಲಯಕ್ಕೆ ಇಂದು ಮಸೀದಿಯಲ್ಲಿ ನಡೆದ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

ಬಾವುಟಗುಡ್ಡೆ ಮಸೀದಿಯು ಆರಾಧನಾ ಸ್ಥಳವಾಗಿರುವುದರಿಂದ ಅದರ ಹತ್ತಿರದಲ್ಲೇ ಶೌಚಾಲಯ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ. ಶೌಚಾಲಯ ನಿರ್ಮಾಣವಾದರೆ ಮಸೀದಿ ಪ್ರಾರ್ಥನೆಯಲ್ಲಿ ಮಾಡುವವರಿಗೆ ತೊಂದರೆಯಾಗಲಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಭೆಯು ತೀವ್ರ ವಿರೋಧ ವ್ಯಕ್ತಪಡಿಸಿತಲ್ಲದೆ, ಈ ಬಗ್ಗೆ ಮನವಿಯನ್ನು ಸಲ್ಲಿಸಿ ಶೌಚಾಲಯ ನಿರ್ಮಾಣ ಕಾರ್ಯ ಕೈಬಿಡುವಂತೆ ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮೇಯರ್ ಕೆ.ಅಶ್ರಫ್, ಮಸೀದಿ ಪಕ್ಕದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಇಂದು ಸಭೆ ಸೇರಿ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಈ ಹಿಂದೆಯೂ ಪಾಲಿಕೆಯ ಕಮಿಷನರ್, ಮೇಯರ್ ಹಾಗೂ ಶಾಸಕ ಲೋಬೊ ಅವರಿಗೂ ಮನವಿ ಸಲ್ಲಿಸಿ ಶೌಚಾಲಯ ನಿರ್ಮಾಣ ಕಾರ್ಯವನ್ನು ಕೈಬಿಡುವಂತೆ ಮನವಿ ಮಾಡಿದ್ದೇವೆ ಎಂದರು.

ರಸ್ತೆ ಅಗಲೀಕರಣಕ್ಕೆ ವಿರೋಧ: ಬಾವುಟಗುಡ್ಡೆ ಮಸೀದಿ ಎದುರಿನಲ್ಲಿ ಹಾದು ಹೋಗುವ ರಸ್ತೆಯ ಅಗಲೀಕರಣಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಈಗಿರುವ ರಸ್ತೆಯೇ ಸಾರ್ವಜನಿಕ ಉಪಯೋಗಕ್ಕೆ ದಾರಾಳವಾಗಿದೆ. ಮತ್ತೆ ಅಗಲೀಕರಣ ಅನಾವಶ್ಯಕ. ರಸ್ತೆ ಅಗಲೀಕರಣಗೊಂಡರೆ ಮಸೀದಿಯಲ್ಲಿ ಪ್ರಾರ್ಥನೆಗೆ ಬರುವವರಿಗೆ ಸ್ಥಳಾವಕಾಶದ ಕೊರತೆಯಾಗಲಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಯನ್ನು ನಿಲ್ಲಿಸುವಂತೆ ಮನವಿ ಮಾಡಲಾಗಿದೆ ಎಂದು ಅಶ್ರಫ್ ತಿಳಿಸಿದರು.

ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೇಲ್ ಕಂದಕ್ ಸಹಿತ ಮುಸ್ಲಿಂ ಮುಖಂಡರು, ಬಂದರ್, ಕುದ್ರೋಳಿ ಪ್ರದೇಶದ ನಾಗರಿಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News