ಕರಾವಳಿಯಲ್ಲಿ ಮುಂಗಾರು ಮಳೆ ಪ್ರವೇಶದ ಸೂಚನೆ: ಜಿಲ್ಲೆಯಾದ್ಯಂತ ಸಾಧಾರಣ ಮಳೆ
Update: 2017-06-02 20:06 IST
ಮಂಗಳೂರು, ಜೂ.1: ಕರಾವಳಿಯಾದ್ಯಂತ ಸಾಧಾರಣ ಮಳೆ ಸುರಿಯಲಾರಂಭಿಸಿದ್ದು, ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಂಗಾರು ಕರಾವಳಿ ಪ್ರವೇಶಿಸುವ ಲಕ್ಷಣ ಕಂಡು ಬರುತ್ತಿದೆ.
ಜೂನ್ 3 ರೊಳಗೆ ಕರಾವಳಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದೇ ಪ್ರಕಾರ ಒಂದು ದಿನ ಮುಂಚಿತವಾಗಿಯೇ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿನ ಉಷ್ಣಾಂಶ ಪಣಂಬೂರು ಕೇಂದ್ರದಲ್ಲಿ 23.3 ಡಿಗ್ರಿ ಸೆ.ಇಳಿಕೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಹೊನ್ನಾವರ, ಭಟ್ಕಳ ಪ್ರದೇಶದಲ್ಲೂ ಉಷ್ಣಾಂಶದಲ್ಲಿ ಇಳಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಸುರಿಯುತ್ತಿದೆ. ಕರಾಳಿಯಲ್ಲಿ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ನಾಡದೋಣಿಗಳ ಮೀನುಗಾರರಿಗೆ ಸಮುದ್ರದಲ್ಲಿ ಬೀಸುವ ಗಾಳಿಯ ವೇಗದ ಬಗ್ಗೆ ಸೂಚನೆಯನ್ನು ಹವಾಮಾನ ಇಲಾಖಾ ಅಧಿಕಾರಿಗಳು ನೀಡಿದ್ದಾರೆ.