×
Ad

ಬಂಟಕಲ್ ವಿದ್ಯಾರ್ಥಿಗಳಿಂದ ‘ಅಗ್ರಿಕಾಪ್ಟರ್’ ಸಾಧನ ತಯಾರಿ

Update: 2017-06-02 20:37 IST

ಉಡುಪಿ, ಜೂ.2: ನಿರ್ದಿಷ್ಟ ಹೊಲದೊಳಗೆ ಮತ್ತು ವಿವಿಧ ಹೊಲಗಳ ನಡುವೆ ಇಳುವರಿಯ ವ್ಯತ್ಯಾಸವನ್ನು ಗುರುತಿಸಿ, ಅಳೆದು ಪ್ರತಿಕ್ರಿಯಿಸುವ ಕಾರ್ಯ ವಿಧಾನವಾಗಿರುವ ನಿಖರ ಕೃಷಿಯನ್ನು ಅಲ್ಪ ವೆಚ್ಚದಾಯಕವನ್ನಾಗಿ ಮಾಡಲು ‘ಅಗ್ರಿಕಾಪ್ಟರ್’ ಎಂಬ ಸಾಧನವನ್ನು ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ.
 

ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನೋಜ್ ಟಿ. ಮಾರ್ಗ ದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕುಲದೀಪ್ ರಾವ್, ಶ್ವೇತಾ ಹೆಚ್, ಸಿಂಧುರಾಣಿ, ಪ್ರಿಯಾಂಕ ವಾಗ್ಲೆ ಈ ಸಾಧನವನ್ನು ತಯಾರಿಸಿದ್ದಾರೆ. ಇಲ್ಲಿ ಮಾನವರಹಿತ ಡ್ರೊಣ್‌ನಲ್ಲಿ ಕೆಮರಾವನ್ನು ಅಳವಡಿಸಲಾಗಿದ್ದು, ಜಮೀನಿನ ನಿರ್ದಿಷ್ಟ ಭಾಗವನ್ನು ಆವರಿಸುವಂತೆ ಛಾಯಾಚಿತ್ರವನ್ನು ವಿವಿಧ ದಿಶೆಗಳಲ್ಲಿ ವಿವಿಧ ಪ್ರದೇಶಗಳಲ್ಲಿ ತೆಗೆಯಲಾಗುತ್ತದೆ. ಈ ಛಾಯಾಚಿತ್ರಗಳನ್ನು ಸಂಸ್ಕರಿಸಿ ವಿವಿಧ ತರಂಗಾಂತರಗಳಲ್ಲಿ ಬೆಳಕಿನ ಪ್ರತಿಫಲನದ ಪ್ರಮಾಣವನ್ನು ಅಳೆಯ ಲಾಗುತ್ತದೆ. ಆ ಪ್ರಮಾಣವನ್ನನುಸರಿಸಿ ಸಸ್ಯಗಳ ಆರೋಗ್ಯವನ್ನು ನಿರ್ಧರಿಸಬಹುದಾಗಿದೆ. ಆ ಮೂಲಕ ಉತ್ತಮ, ಮಧ್ಯಮ ಮತ್ತು ಕನಿಷ್ಟ ಇಳುವರಿಯ ಪ್ರದೇಶಗಳನ್ನು ಗುರುತಿಸಬಹುದು. ಕೃಷಿ ಜಮೀನಿನ ಮೇಲೆ ಡ್ರೋಣ್‌ನ್ನು ಸುತ್ತಿಸುವ ಮೂಲಕ ಸಸ್ಯಗಳ ಸಂಖ್ಯೆಯನ್ನೂ ಕೂಡ ಎಣಿಸಬಹುದಾಗಿದೆ. ರೈತನು ಸಸ್ಯಗಳ ಆರೋಗ್ಯ ಕರ ಬೆಳವಣಿಗೆಯ ಬಗ್ಗೆ ಅರಿತುಕೊಳ್ಳಬಹುದಾಗಿದೆ. ಅಲ್ಲದೇ ಈ ಡ್ರೋಣ್‌ನ್ನು ಬೀಜ ಬಿತ್ತನೆ, ಕೀಟನಾಶಕ ಸಿಂಪಡಿಸುವುದೇ ಮೊದಲಾದ ಕಾರ್ಯಗಳಿಗೂ ಬಳಸಬಹುದಾಗಿದೆ.

ಬೆಂಗಳೂರಿನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಕೃಷಿ ಕೀಟ ಸಂಸಾಧನ ವಿಭಾಗ ಮತ್ತು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಗಳಲ್ಲಿ ಭತ್ತ, ಬದನೆ ಮತ್ತು ಸೂರ್ಯಕಾಂತಿ ಗಿಡಗಳ ಸ್ವಾಸ್ಥ್ಯ ಮತ್ತು ಸಂಖ್ಯೆ ಯನ್ನು ಪಡೆಯುವುದಕ್ಕಾಗಿ ಸರ್ವೇಕ್ಷಣೆಯನ್ನು ಮಾಡಿ ಅಗ್ರಿಕಾಪ್ಟರ್‌ನ ಉಪ ಯೋಗವನ್ನು ಪರೀಕ್ಷಿಸಲಾಗಿದೆ.

ಅಗ್ರಿಕಾಪ್ಟರ್ ಮಾದರಿಯು ಮಹಾವಿದ್ಯಾಲಯದಲ್ಲಿ ನಡೆದ ಐಐಓಟಿ- 2016ರಲ್ಲಿ ದ್ವಿತೀಯ ಸ್ಥಾನವನ್ನು, ಮಂಗಳೂರಿನ ಸಂತ ಜೋಸೆಫರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಪ್ರಬಂಧ ಮಂಡನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು, ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಸಮಗ್ರ ಚಾಂಪಿ ಯನ್ ಶಿಪ್ ಪ್ರಶಸ್ತಿಯನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News