ಉಡುಪಿ ಚರ್ಚ್‌ನ ನೂತನ ಧರ್ಮಗುರು ನೇಮಕ
ಉಡುಪಿ, ಜೂ.2: ಉಡುಪಿ ಶೋಕಮಾತಾ ಇಗರ್ಜಿಯ ನೂತನ ಧರ್ಮ ಗುರುಗಳಾಗಿ ಧರ್ಮಪ್ರಾಂತದ ಕುಲಪತಿಗಳು ಹಾಗೂ ಪ್ರಸ್ತುತ ಬಾರ್ಕೂರು ಚರ್ಚಿನ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ ಅವರನ್ನು ನೇಮಕ ಮಾಡಿ ಉಡುಪಿ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಆದೇಶ ನೀಡಿದ್ದಾರೆ.
ಕಳೆದ ಆರು ವರ್ಷಗಳಿಂದ ಉಡುಪಿ ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ವಂ.ಫ್ರೆಡ್ ಮಸ್ಕರೇನ್ಹಸ್ ಅವರನ್ನು ಕುಂದಾಪುರ ವಲಯದ ಪಡು ಕೋಣೆ ಚರ್ಚಿನ ಧರ್ಮಗುರುಗಳಾಗಿ ವರ್ಗಾವಣೆ ಮಾಡಲಾಗಿದೆ. ವಂ. ವಲೇರಿಯನ್ ಮೆಂಡೊನ್ಸಾ ಉಡುಪಿ ಇಗರ್ಜಿಯ ನೂತನ ಧರ್ಮಗುರು ಗಳಾಗಿ ಜೂ. 7ರಂದು ಸಂಜೆ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.
ಶೋಕಮಾತ ಇಗರ್ಜಿಯಲ್ಲಿ ಕಳೆದ 2 ವರ್ಷಗಳಿಂದ ಸೇವೆ ನೀಡುತ್ತಿದ್ದ ಸಹಾಯಕ ಧರ್ಮಗುರು ವಂ.ರೋಯ್‌ಸ್ಟನ್ ಶಂಕರಪುರ ಚರ್ಚಿಗೆ ಸಹಾಯಕ ಧರ್ಮಗುರುವಾಗಿ ವರ್ಗಾವಣೆಗೊಂಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಮೈನರ್ ಬೆಸಿಲಿಕಾದ ಸಹಾಯಕ ಧರ್ಮ ಗುರು ವಂ.ವಿಜಯ್ ಡಿಸೋಜ ನೇಮಕಗೊಂಡಿದ್ದಾರೆ.
ಬಾರ್ಕೂರು ಚರ್ಚಿನ ತೆರವಾದ ಸ್ಥಾನಕ್ಕೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ಫಿಲಿಪ್ ನೇರಿ ಆರಾನ್ಹಾ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.