×
Ad

ದ.ಕ. ಜಿಲ್ಲಾಯಲ್ಲಿ ಭಯದ ವಾತಾವರಣ ನಿರ್ಮಾಣ ಖಂಡನೀಯ: ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ

Update: 2017-06-02 21:07 IST

ಬಂಟ್ವಾಳ, ಜೂ. 2: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಲ್ಲಡ್ಕದಲ್ಲಿ ಪೊಲೀಸರ ಮೂಲಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭಯದ ವಾತಾವರಣ ನಿರ್ಮಿಸುತ್ತಿರುವುದು ಖಂಡನೀಯ. ಒಂದು ವರ್ಗದ ಓಲೈಕೆಗಾಗಿ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಿ ಬಹುಸಂಖ್ಯಾತರ ಮೇಲೆ ಮಾತ್ರ ಕೇಸು ದಾಖಲಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಆರೋಪಿಸಿದ್ದಾರೆ.

ಶುಕ್ರವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದ ಹಿಂದೆ ಕಲ್ಲಡ್ಕದಲ್ಲಿ ವಿಭಿನ್ನ ಕೋಮಿನ ಎರಡು ವ್ಯಕ್ತಿಗಳ ವೈಯುಕ್ತಿಕ ಜಗಳಕ್ಕೆ ಕೋಮು ಗಲಭೆಯ ಬಣ್ಣವನ್ನು ಹಚ್ಚಿ ಕಲ್ಲಡ್ಕದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದರು.

ಈ ಹಿಂದೆ ಕಲ್ಲಡ್ಕದಲ್ಲಿ ನಡೆದ ಗಲಭೆ ವೇಳೆ ಪೊಲೀಸರು ಕೆಲವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮೊನ್ನೆಯ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ನಿಜಾಂಶ ಗೊತ್ತಿದ್ದರೂ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳದಿರುವುದು ಯಾವ ನ್ಯಾಯ. ಇಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಸಚಿವರ ಒತ್ತಡಕ್ಕೆ ಮಣಿದು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆಂದು ಆರೋಪಿಸಿದ ಅವರು, ಈ ಪ್ರಕರಣವನ್ನು ಜಿಲ್ಲೆಯಿಂದ ಹೊರತಾದ ಪೊಲೀಸ್ ಅಧಿಕಾರಿಯ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಘಟನೆಯ ಮರುದಿನ ಗುಂಪೊಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಬಂದ್ ಗೊಳಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲಾ ಘಟನೆಯ ಬಳಿಕ ಸಚಿವ ರಮಾನಾಥ ರೈ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಮೌನವಾಗಿರುವುದರ ಹಿಂದೆ ಅವರ ಷಡ್ಯಂತ್ರ ಇದೆ ಎನ್ನುವುದನ್ನು ಸ್ಪಷ್ಟ ಮಾಡಿಕೊಟ್ಟಂತಾಗಿದೆ ಎಂದರು.

ಕಲ್ಲಡ್ಕ ಪರಿಸರದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದ್ದು, ಜನಸಾಮಾನ್ಯರು ಎಂದಿನಂತೆ ಓಡಾಟ ನಡೆಸುತ್ತಿದ್ದರೂ ಸೆ.144 ನ್ನು ಮತ್ತೆ ಮುಂದುವರಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಕಲ್ಲಡ್ಕ ಪರಿಸರದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿ ಭಯದ ವಾತಾವರಣ ಉಂಟುಮಾಡಲಾಗುತ್ತಿದೆ ಎಂದರು.

ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ ದಾಂಧಲೆ ಸೃಷ್ಟಿಸಿರುವ ಮತ್ತು ಸುಳ್ಳು ದೂರು ಕೊಟ್ಟ ಕಿಡಿಗೇಡಿಗಳ ವಿರುದ್ಧವೂ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ಪ್ರಕರಣದಲ್ಲಿ ಸಿಲುಕಿಸಲಾದ ಮಿಥುನ್ ಸೇರಿದಂತೆ ಅಮಾಯಕರ ಮೇಲಿನ ಪ್ರಕರಣವನ್ನು ವಾಪಾಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಬಿಜೆಪಿಯ ಎಸ್ಸಿ-ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ತಾಪಂ ಸದಸ್ಯ ಮಹಾಬಲ ಆಳ್ವ, ಬಂಟ್ವಾಳ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ರೈತ ಮೋರ್ಚಾ ಉಪಾಧ್ಯಕ್ಷ ಅಣ್ಣುಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News