ವರಂಗ ಬಳಿ ಕಾರು- ಬೈಕ್ ಢಿಕ್ಕಿ: ಸವಾರ ಮೃತ್ಯು, ಯುವತಿ ಗಂಭೀರ
ಹೆಬ್ರಿ, ಜೂ.2: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಹಿಂಬದಿಯಲ್ಲಿದ್ದ ಯುವತಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿ ಸಮೀಪದ ವರಂಗ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಮುನಿಯಾಲು ಮುಟ್ಲುಪಾಡಿಯ ಗೋವಿಂದ ನಾಯ್ಕ ಹಾಗೂ ಪ್ರೇಮಾ ನಾಯ್ಕ ದಂಪತಿಯ ಪುತ್ರ ಪ್ರದೀಪ್ ನಾಯ್ಕ (22) ಎಂದು ಗುರು ತಿಸಲಾಗಿದೆ.
ಬೈಕಿನ ಹಿಂಬದಿಯಲ್ಲಿದ್ದ ಮುನಿಯಾಲು ಪಡುಕುಡೂರಿನ ದಿವ್ಯಾ ಎಂಬವರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀರ್ಥಹಳ್ಳಿಯ ಧೀರಜ್ ಎಂಬವರು ತನ್ನ ಕಾರಿನಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಹೆಬ್ರಿ -ಕಾರ್ಕಳ ರಸ್ತೆಯಲ್ಲಿ ಹೋಗುತ್ತಿರುವಾಗ ವರಂಗ ಪೇಟೆಯ ಸಮೀಪ ಮುನಿಯಾಲು ಕಡೆಯಿಂದ ಹೆಬ್ರಿ ಕಡೆಗೆ ಅತಿವೇಗದಿಂದ ಬರುತ್ತಿದ್ದ ಪ್ರದೀಪ್ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ. ಬೈಕಿನಿಂದ ಎಸೆಯಲ್ಪಟ್ಟ ಪ್ರದೀಪ್ ಎದುರಿನಲ್ಲಿ ಬರುತ್ತಿದ್ದ ಧೀರಜ್ರ ಕಾರಿನ ಮುಂದಿನ ಭಾಗಕ್ಕೆ ಢಿಕ್ಕಿ ಹೊಡೆದರು. ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಹಿಂಬದಿಯಲ್ಲಿ ಕುಳಿತಿದ್ದ ಪ್ರದೀಪ್ ಪರಿಚಯದ ದಿವ್ಯಾ ರಸ್ತೆಗೆ ಬಿದ್ದ ಗಂಭೀರವಾಗಿ ಗಾಯಗೊಂಡರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.