×
Ad

ಜಾನುವಾರು ಮಾರಾಟ ನಿಷೇಧ ಕಾನೂನು ಹಿಂದುತ್ವ ರಾಷ್ಟ್ರದ ಎಜೆಂಡಾ-ಅಬ್ದುಲ್ ಲತೀಫ್

Update: 2017-06-02 22:28 IST

ಪುತ್ತೂರು, ಜೂ.2: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾನುವಾರು ಮಾರಾಟ ನಿಷೇಧಕ್ಕೆ ಮುಂದಾಗಿರುವುದು ಜಾತ್ಯಾತೀತತೆಯನ್ನು ಮುರಿದು ದೇಶವನ್ನು ಕೇಸರೀಕರಣ, ಹಿಂದುತ್ವದ ರಾಷ್ಟ್ರ ಮಾಡುವ ಅಜೆಂಡಾದ ಒಂದು ಭಾಗ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೆ. ಆರೋಪಿಸಿದರು.
 

ಅವರು ಜಾನುವಾರು ಮಾರಾಟ ನಿಷೇಸಿದ ಕೇಂದ್ರ ಸರಕಾರದ ಕ್ರಮವನ್ನು ಹಾಗೂ ತೆಲಂಗಾಣದಲ್ಲಿ ನಡೆದ ಚರ್ಚ್ ದಾಳಿಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನಗರದ ಬಸ್ ನಿಲ್ದಾಣದ ಗಾಂಧಿ ಕಟ್ಟೆಯ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರದ ಗೋ ಮಾರಾಟ ನಿಷೇಧ ಎಂಬುದು ಬೂಟಾಟಿಕೆಯ ಕ್ರಮ, ಇದು ಗೋವಿನ ಮೇಲಿನ ನೈಜ ಕಾಳಜಿ ಅಲ್ಲ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರದ ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ಕ್ರಮವಾಗಿ ಈ ವಿಚಾರಕ್ಕೆ ಮುಂದೆ ತರಲಾಗಿದೆ ಎಂದು ಆರೋಪಿಸಿದರು. ಯಾವುದೇ ಆಹಾರ ಕ್ರಮವನ್ನು ವಿರೋಸುವ ಅಧಿಕಾರ ಯಾರಿಗೂ ಇಲ್ಲ. ನಮಗೆ ಹಸಿವಾದಾಗ ಗೋವನ್ನು ಆಹಾರವಾಗಿ ಬಳಸುತ್ತೇವೆ. ಅದನ್ನು ತಡೆಯಲು ದೇಶದ ಯಾರಿಂದಲೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ದೇಶಾದ್ಯಂತ ಜಾನುವಾರು ಮಾರಾಟ ನಿಷೇಧದ ಕೇಂದ್ರ ಸರಕಾರದ ಅಧಿಸೂಚನೆ ಹಾಗು ತೆಲಂಗಾಣ ಚರ್ಚ್ ಮೇಲಿನ ದಾಳಿ ಖಂಡಿಸಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಜೂ 2 ರಂದು ಪುತ್ತೂರು ಗಾಂಧಿಕಟ್ಟೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬಿಜೆಪಿ ಸರಕಾರದ ವಿವೇಚನಾ ರಹಿತ ಕ್ರಮವು ಸರ್ವಾಧಿಕಾರದ ಪರಮಾವಧಿಯಾಗಿದ್ದು ದೇಶದ 1 ಲಕ್ಷ ಕೋಟಿ ವಹಿವಾಟಿನ ಮಾಮಸದ ಮಾರುಕಟ್ಟೆಯನ್ನು ತೀವ್ರವಾಗಿ ಬಾಧಿಸಲಿದೆ, ಲಕ್ಷಾಂತರ ವ್ಯಾಪಾರಿಗಳು ಕೆಲಸ ಕಳೆದಕೊಳ್ಳಲಿದ್ದು ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಬೀಫ್ ರಫ್ತಿನಲ್ಲಿ ವಿಶ್ವದಲ್ಲಿಯೇ ನಂ.1 ಸ್ಥಾನದಲ್ಲಿರುವ ಭಾರತದ ಪಾಲಿಗೆ ಇದು ದುಬಾರಿಯಾಗಿ ಪರಿಣಿಸಲಿದೆ ಎಂದು ಅವರು ಹೇಳಿದರು.

ಗೋವನ್ನು ರಾಜಕಿಯ ವಸ್ತುವಾಗಿ ಬಿಂಬಿಸುವ ಕೇಂದ್ರ ಸರಕಾರ ತಾಕತ್ತಿದ್ದರೆ ಹಿಂದೂಗಲೇ ನಡೆಸುವ ದೇಶದ ಪ್ರಸಿದ್ದ ಬೀಫ್ ರಫ್ತು ಕಂಪೆನಿಗಳಾದ ಅಲ್ ಕಬೀರ್, ಅಲ್ ದುಹಾ ಮೊದಲಾದವುಗಳನ್ನಿ ನಿಷೇಧ ಮಾಡಲಿ ಎಂದು ಆಗ್ರಹಿಸಿದ ಅವರು ಹಿಂದೂಗಳ ವೇದಗಳಲ್ಲಿಯೂ ಮಾಂಸ ಭಕ್ಷಣೆಯ ಉಲ್ಲೇಖವಿದೆ, ಗೊವಿನಂತೆ ಮೀನು ಹಾಗೂ ಹಂದಿಯನ್ನೂ ನಿಷೇಧ ಮಾಡಲಿ ಎಂದು ಅವರು ಸವಾಲು ಹಾಕಿದರು

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ಮಾತನಾಡಿ ಜನರನ್ನು ನಿರಂತರವಾಗಿ ಮೋಸ ಮಾಡುತ್ತಿರುವ ಕೇಂದ್ರ ಸರಕಾರ ಸಂಘ ಪರಿವಾರದ ತೃಪ್ತಿಗಾಗಿಯೇ ಕೆಲಸ ಮಾಡುತ್ತಿದೆ. ಕೇಂದ್ರದ ದೃಷ್ಟಯಲ್ಲಿ ಸಂಘ ಪರಿವಾರವರು ಮಾತ್ರ ನೆಮ್ಮದಿಯಿರಬೇಕಾಗಿದ್ದು ಇಲ್ಲಿನ ಕ್ರಯಸ್ತ, ದಲಿತ, ಮುಸಲ್ಮಾನರನ್ನು ದಮನಿಸುವ ಯತ್ನ ಮಾಡುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ತೆಲಂಗಾಣ ಚರ್ಚ್ ಮೇಲೆ ಸಂಘಪರಿವಾರ ದಾಳಿ ನಡೆಸಿ ಚರ್ಚ್‌ನ್ನು ಹುಡಿಗೈದಿದ್ದು ಇದು ಯಾವ ಅಚ್ಚೇದಿನ್ ಸಂಕೇತ ಎಂದು ಪ್ರಶ್ನಿಸಿದ ಅವರು ದೇಶದಲ್ಲಿ ಯಾವುದನ್ನೂ ಇನ್ನೊಬ್ಬರ ಮೇಲೆ ಬಲವಂತವಾಗಿ ಹೇರಲು ಅವಕಾಶವಿಲ್ಲ, ಸುಳ್ಳಿನ ಕಂತೆಗಳ ಮೂಲಕ ದೇಶದ ಜನರನ್ನು ವಂಚಿಸುವ ಕೇಂದ್ರ ಸರಕಾರದ ಬಗ್ಗೆ ಎಲ್ಲರೂ ಜಾಗ್ರತೆ ವಹಿಸಬೇಕು ಎಂದರು.

ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೊ ಇಲ್ಲವೋ ಎಂದ ನನಗೆ ಅನುಮಾನ ಮೂಡುತ್ತಿದೆ ಎಂದವರು ವೋಟ್‌ಬ್ಯಾಂಕ್‌ಗಾಗಿ ಇಲ್ಲಿನ ಕಾಂಗ್ರೆಸ್ ಮೃದು ಧೋರಣೆ ತಾಳುತ್ತಿದೆ, ಇವರಿಗೆ ಜನರ ಹಿತವಲ್ಲ ಮುಖ್ಯ ಅಧಿಕಾರ ಮುಖ್ಯವಾಗಿದೆ ಎಂದು ಹೇಳಿದರು.

ಧಾರ್ಮಿಕ ಗ್ರಂಥ ಮನುಸ್ಮೃತಿಯ 5 ನೇ ಅಧ್ಯಾಯದಲ್ಲಿ ಮಾಂಸಾಹಾರ ಸೇವನೆಯ ಕುರಿತಂತೆ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ವಿರೋಸಿದವರು ಅದನ್ನು ಮೊದಲು ಓದಬೇಕು. ಇದರಲ್ಲಿ ಮಾಂಸವನ್ನು ತಿನ್ನದವರು ಸತ್ತರೆ 21 ಜನ್ಮ ಪಶುವಾಗಿ ಹುಟ್ಟುತ್ತಾರೆ ಎಂದು ಉಲ್ಲೇಖಿಸಲಾಗಿದೆ. ನಮ್ಮ ಸಹೋದರ ಬಾಂಧವರು ಈ ರೀತಿ ಹುಟ್ಟದೇ ಇರಲು ಗೋಮಾಂಸವನ್ನು ಸೇವಿಸಲೇ ಬೇಕು. ಕೇಂದ್ರ ಸರಕಾರ ಕೂಡಲೇ ಇಂತಹ ನಿಯಮವನ್ನು ಹಿಂದಕ್ಕೆ ಪಡೆಯಬೇಕು. ರಾಜ್ಯ ಸರಕಾರ ಗೋಮಾಂಸ ಸೇವಿಸುವವರಿಗೆ ಸೂಕ್ತ ರಕ್ಷಣೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಸಂಸ ಪುತ್ತೂರು ತಾಲೂಕು ಸಂಚಾಲಕ ಆನಂದ ಮಿತ್ತಬೈಲು ಮಾತನಾಡಿ ಗೋವಿನ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ದಲಿತರ, ಮುಸಲ್ಮಾನರ ಮೇಲೆ ದಾಳಿಯಾದಲ್ಲಿ ಅಂಬೇಡ್ಕರ್ ಸಿದ್ದಾಂತದ ಅಡಿಯಲ್ಲಿ ಪಳಗಿದ ದಲಿತ ಯುವಕರ ತಂಡ ಪ್ರತಿದಾಳಿಗೆ ಸಿದ್ದವಾಗಿದೆ. ದಲಿತರು ಈ ದೇಶದ ಮೂಲ ನಿವಾಸಿಗಳಾಗಿದ್ದು ನಮ್ಮ ಆಹಾರದ ಮೇಲಿನ ನಿರ್ಬಂಧ ಹೇರಲು ಯಾರಿಗೂ ಅವಕಾಶವಿಲ್ಲ, ನಾನು ಓರ್ವ ರೈತನಾಗಿದ್ದು ಗೋವನ್ನು ಸಾಕುತ್ತಿದ್ದೇನೆ ಅನಿವಾರ್ಯ ಸಂದರ್ಭದಲ್ಲಿ ಅದನ್ನು ತಿನ್ನತ್ತಲೂ ಇದ್ದೇನೆ, ಮುಂದೆಯೂ ತಿನ್ನಲಿದ್ದೇನೆ, ನನ್ನ ಆಹಾರದ ಹಕ್ಕನ್ನು ಕಸಿಯಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
 

ಗೋವು ನಿಮಗೆ ತಾಯಿಯಾದರೆ ನಮಗೆ ಆಹಾರವಾಗಿಯೂ ಉಪಯೋಗಿಸಬಹುದಾಗಿದೆ, ಸಂಸ್ಕೃತಿಯಿಲ್ಲದವರಿಂದ ನಮಗೆ ಸಂಸ್ಕೃತಿ ಪಾಠ ಅಗತ್ಯವಿಲ್ಲ. ಆರೆಸ್ಸೆಸ್ ಪ್ರಾಯೋಜಕ್ವದ ಕೇಂದ್ರ ಸರಕಾರದಿಂದ ಇಂತಹ ಸಂವಿಧಾನ ವಿರೋಧಿ ಕ್ರಮಗಳ ನಿರೀಕ್ಷೆ ಮೊದಲೇ ಇತ್ತು. ಯಾಕೆಂದರೆ ಪುರೋಹಿತ ಶಾಹಿ ವ್ಯವಸ್ಥೆಗಾಗಿ ಜನಸಾಮಾನ್ಯರನ್ನು ಬೆಂಗಾವಲಾಗಿ ಇಟ್ಟಿರುವ ಫ್ಯಾಸ್ಟಿಸ್ಟ್‌ಗಳಿವರು. ಇವರ ದೇಶಪ್ರೇಮ ನಿಜವಾಗಿದ್ದರೆ, ಪಾಕಿಸ್ತಾನ, ಚೀನಾ ಗಡಿಗಳಲ್ಲಿರುವ ಭಯೋತ್ಪಾಧಕರನ್ನು ತಡೆಯಲು 33 ಸಾವಿರ ಕೋಟಿ ದೇವತೆಗಳ ಶಕ್ತಿ ಹೊಂದಿರುವ ಗೋವುಗಳನ್ನು ಅಡ್ಡ ನಿಲ್ಲಿಸಿ ದೇಶವಾಸಿಗಳ ರಕ್ಷಣೆ ಮಾಡಲಿ ಎಂದು ವ್ಯಂಗ್ಯವಾಡಿದರು.

ದಲಿತರು ನಾಗರೀಕತೆಯ ಎಲ್ಲಾ ಪುಟಗಳನ್ನೂ ಅರಿತಿದ್ದಾರೆ. ಸಿದ್ಧನಾಯಕನ ಸೈನ್ಯದಂತೆ ರಾಜ್ಯದಲ್ಲಿ 500 ಕ್ಕೂ ಹೆಚ್ಚು ದಲಿತರು ಯುವಕರ ತಂಡ ಸಿದ್ಧಗೊಂಡಿದ್ದು, ಗೋವಿನ ಹೆಸರಿನಲ್ಲಿ ದಲಿತರು, ಮುಸಲ್ಮಾನರು, ಕ್ರೈಸ್ತರ ಮೇಲೆ ಹಲ್ಲೆ, ಅಮಾನವೀಯ ವರ್ತನೆ ತೋರಿದರೆ ಪ್ರತಿ ದಾಳಿಗೂ ಸನ್ನದ್ಧರಿದ್ದೇವೆ. ಈ ನಿಟ್ಟಿನಲ್ಲಿ ಎಸ್‌ಡಿಪಿಐನೊಂದಿಗೆ ಕೈ ಜೋಡಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಮಜೀದ್ ಖಾನ್, ಜಿಲ್ಲಾ ಉಪಾಧ್ಯಕ್ಷ ಸಿದ್ದಿಕ್ ಕೆ.ಎ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಮೀದ್ ಮೆಜೆಸ್ಟಿಕ್, ಪಿಎಫ್‌ಐ ಬೆಳ್ತಂಗಡಿ ಅಧ್ಯಕ್ಷ ಇಕ್ಬಾಲ್ ಬಳ್ಳಮಂಜ, ಪಿಎಫ್‌ಐ ಪುತ್ತೂರು ಅಧ್ಯಕ್ಷ ರಿಝ್ವಾನ್, ಎಸ್‌ಡಿಪಿಐ ಸುಳ್ಯ ವಿದಾನಸಭಾ ಅಧ್ಯಕ್ಷ ಉಮ್ಮರ್ ಸುಳ್ಯ, ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷ ನವಾರ್ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ಡಿಪಿಐ ಪುತ್ತೂರು ಕಾರ್ಯದರ್ಶಿ ಜಾಬೀರ್ ಸ್ವಾಗತಿಸಿ, ಉಸ್ಮಾನ್ ಎ.ಕೆ. ವಂದಿಸಿದರು. ಪ್ರತಿಭಟನೆ ಸಭೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಪುತ್ತೂರಿನ ವಿವಿಧ ಠಾಣೆಗಳ 50 ಕ್ಕೂ ಹೆಚ್ಚು ಪೊಲೀಸರು ನಗರಠಾಣೆಯ ಎಸ್‌ಐ ಓಮನ ಹಾಗೂ ಗ್ರಾಮಾಂತರ ಠಾಣೆಯ ಎಸ್‌ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ಬಂದೋಬಸ್ತ್ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News