ದೇವರನ್ನು ಸಂತೃಪ್ತಿಗೊಳಿಸಲು ಏಳು ತಿಂಗಳ ಹಸುಗೂಸಿನ ಬಲಿ
ಜಮ್ಷೆಡ್‌ಪುರ, ಜೂ.2: ತನಗೆ ಸಂತಾನಭಾಗ್ಯವನ್ನು ಕರುಣಿಸು ವಂತೆ ದೇವರನ್ನು ಸಂತೃಪ್ತಿಗೊಳಿಸಲು ವ್ಯಕ್ತಿಯೋರ್ವ ಮಾಂತ್ರಿಕನ ನೆರವಿನಿಂದ ಏಳು ತಿಂಗಳ ಹಸುಗೂಸನ್ನು ಬಲಿ ನೀಡಿರುವ ಅಮಾನುಷ ಘಟನೆ ಜಾರ್ಖಂಡ್‌ನ ಸೆರಾಯ್‌ಕೇಲಾ-ಖರ್ಸ್ವಾನ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಗಳಾದ ಚೈಡಾ ಗ್ರಾಮದ ನಿವಾಸಿ ಭದೋಯಿ ಕಾಲಿಂದಿ ಮತ್ತು ಮಾಂತ್ರಿಕ ಕರ್ಮು ಕಾಲಿಂದಿ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಹಾವಾಡಿಗನಾಗಿರುವ ಭದೋಯಿ ಎಂಟು ವರ್ಷಗಳ ಹಿಂದೆ ಮದುವೆ ಯಾಗಿದ್ದನಾದರೂ ಮಕ್ಕಳಾಗಿರಲಿಲ್ಲ.
ಮೇ 26ರಂದು ರಾತ್ರಿ ಭದೋಯಿ ಮತ್ತು ಕರ್ಮು ಸೇರಿಕೊಂಡು ನೆರೆಯ ಸುಭಾಷ್ ಗೋಪೆ ಎಂಬಾತನ ಹೆಣ್ಣುಮಗುವನ್ನು ಅಪಹರಿಸಿ ನದಿಯ ದಡದಲ್ಲಿರುವ ಸ್ಮಶಾನದಲ್ಲಿ ಬಲಿ ನೀಡಿದ್ದರು.
ಮಗು ನಾಪತ್ತೆಯಾಗಿರುವ ಬಗ್ಗೆ ಗೋಪೆ ಪೊಲೀಸರಿಗೆ ದೂರು ನೀಡಿದ್ದ. ಘಟನೆಯ ಬಳಿಕ ಕರ್ಮು ಗ್ರಾಮದಿಂದ ನಾಪತ್ತೆಯಾಗಿದ್ದು, ಮಗುವಿನ ಅಪಹರಣದಲ್ಲಿ ಆತ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಲಭ್ಯ ಸುಳಿವುಗಳ ಆಧಾರದಲ್ಲಿ ನಿನ್ನೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ಸಂದರ್ಭ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿ ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಗುವನ್ನು ಬಲಿ ನೀಡಲು ಬಳಸಿದ್ದ ಆಯುಧವನ್ನು ಭದೋಯಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.