×
Ad

ಚುನಾವಣಾ ಆಯೋಗದ ‘ಹ್ಯಾಕಥಾನ್’ಗೆ ಹೈಕೋರ್ಟ್ ಆಕ್ಷೇಪ

Update: 2017-06-02 23:13 IST

ಹೊಸದಿಲ್ಲಿ, ಜೂ.2: ಶನಿವಾರ ನಡೆಸಲು ಉದ್ದೇಶಿಸಿರುವ ಹ್ಯಾಕಥಾನ್‌ಗೆ 14 ಇಎಂವಿ(ವಿದ್ಯುನ್ಮಾನ ಮತಯಂತ್ರ)ಗಳನ್ನು ಚುನಾವಣಾ ಆಯೋಗ ಅಣಿಗೊಳಿಸಿದ್ದು ಈ ಯಂತ್ರಗಳನ್ನು ತಿರುಚಲು ಸಾಧ್ಯ ಎಂಬ ಆರೋಪವನ್ನು ಸಾಬೀತುಪಡಿಸಲು ರಾಜಕೀಯ ಪಕ್ಷಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಮತಯಂತ್ರಗಳನ್ನು ಇತ್ತೀಚೆಗೆ ನಡೆದಿದ್ದ ಉ.ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಬಳಸಲಾಗಿತ್ತು. ಈ ಮಧ್ಯೆ, ಹ್ಯಾಕಥಾನ್ ಕಾರ್ಯಕ್ರಮ ಅಸಾಂವಿಧಾನಿಕ ಎಂದು ತಿಳಿಸಿರುವ ಉತ್ತರಾಖಂಡ ಹೈಕೋರ್ಟ್, ತಾನು ಇದನ್ನು ರದ್ದುಪಡಿಸಬಹುದು ಎಂದು ತಿಳಿಸಿದೆ. ಹ್ಯಾಕಥಾನ್ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತ ಡಾ. ರಮೇಶ್ ರೆಡ್ಡಿ ಎಂಬವರು ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಹೇಳಿಕೆ ನೀಡಿದೆ. ಚುನಾವಣಾ ಆಯೋಗ ವ್ಯವಸ್ಥೆಗೊಳಿಸಿರುವ ಹ್ಯಾಕಥಾನ್ ಜೂ.3ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. 14 ಇಎಂವಿಗಳನ್ನು ಸಿದ್ಧವಾಗಿಡಲಾಗಿದೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಎಡಪಕ್ಷಗಳು ಹ್ಯಾಕಥಾನ್ ಸವಾಲು ಸ್ವೀಕರಿಸುವುದಾಗಿ ತಿಳಿಸಿರುವ ಕಾರಣ ಈ ಪಕ್ಷಗಳ ಪ್ರತಿನಿಧಿಗಳಿಗೆ ತಲಾ ನಾಲ್ಕು ಯಂತ್ರಗಳನ್ನು ‘ತಿರುಚಿ ತೋರಿಸಲು’ ನೀಡಲಾಗುವುದು. ಈ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯುತ್ತದೆ. ಪ್ರಥಮ ಹಂತದಲ್ಲಿ- ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಈ ಯಂತ್ರಗಳಲ್ಲಿ ಸಂಗ್ರಹವಾದ ಮತಗಳನ್ನು ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷದ ಪರ ದಾಖಲಾಗುವಂತೆ ತಿರುಚಲಾಗಿದೆ ಎಂಬುದನ್ನು ಹ್ಯಾಕರ್‌ಗಳು ಸಾಬೀತುಪಡಿಸಬೇಕು. ಎರಡನೆ ಹಂತದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಮತ ಯಂತ್ರಗಳನ್ನು ಮತದಾನಕ್ಕಿಂತ ಮೊದಲು ಅಥವಾ ಬಳಿಕ ತಿರುಚಲಾಗಿದೆ ಎಂದು ಹ್ಯಾಕರ್‌ಗಳು ಸಾಬೀತು ಪಡಿಸಬೇಕಿದೆ. ‘ತಿರುಚುವ ಯತ್ನ’ ನಡೆಸುವಾಗ ಮತಯಂತ್ರ ಕಾರ್ಯಾಚರಣೆ ಸ್ಥಗಿತಗೊಳಿಸಿದರೆ ಆಗ ಹ್ಯಾಕರ್‌ಗಳು ವಿಫಲರಾದರು ಎಂದರ್ಥ. ಒಂದು ಪಕ್ಷದ ಮೂವರು ಸದಸ್ಯರು ಪಾಲ್ಗೊಳ್ಳಬಹುದಾಗಿದ್ದು ಇವರು ಇವಿಎಂಗಳ ಒಳಗಿರುವ ಸರ್ಕ್ಯೂಟ್‌ಗಳು, ಚಿಪ್ಸ್, ಮದರ್‌ಬೋರ್ಡ್ ಇವುಗಳನ್ನು ಭೌತಿಕವಾಗಿ ಪರೀಕ್ಷಿಸಬಹುದು. ಆದರೆ ಯಾವುದೇ ಭಾಗಗಳನ್ನು ಬದಲಿಸುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳಿಗೆ ಅರವಿಂದ್ ಕೇಜ್ರೀವಾಲ್ ನೇತೃತ್ವದ ‘ಆಪ್’ ಪಕ್ಷ ವಿರೋಧ ಸೂಚಿಸಿತ್ತು. ಇದೇ ವೇಳೆ, ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಸೇರಿಕೊಂಡು ಒಳಸಂಚು ನಡೆಸಿ ಚುನಾವಣೆಯಲ್ಲಿ ಯಶಸ್ಸು ಸಾಧಿಸಿದೆ ಎಂದು ಆರೋಪಿಸಿದ್ದ ಆಪ್ ಪಕ್ಷ, ತಾನು ಜೂ.3ರಂದು ಸಮಾನಾಂತರ ಹ್ಯಾಕಥಾನ್ ಆಯೋಜಿಸುವುದಾಗಿ ತಿಳಿಸಿದೆ. ಇಎಂವಿಗಳನ್ನು ತಿರುಚಬಹುದು ಎಂದು ಕಳೆದ ತಿಂಗಳು ತಾನು ದಿಲ್ಲಿ ವಿಧಾನಸಭೆಯಲ್ಲಿ ಸಾಬೀತುಪಡಿಸಲು ಬಳಸಿರುವ ಮತಯಂತ್ರಗಳನ್ನೇ ಹ್ಯಾಕಥಾನ್‌ಗೆ ಬಳಸಲಾಗುವುದು ಎಂದು ‘ಆಪ್’ ತಿಳಿಸಿದೆ. ಆದರೆ ಈ ಮತಯಂತ್ರಗಳು ನೈಜ ವಿದ್ಯುನ್ಮಾನ ಮತಯಂತ್ರಗಳಿಗಿಂತ ಬಹಳಷ್ಟು ಭಿನ್ನವಾಗಿರುವ ಕಾರಣ ಫಲಿತಾಂಶವನ್ನು ಒಪ್ಪಲಾಗದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News