ಅಸಹಾಯಕ ಕುಟುಂಬಕ್ಕೆ ‘ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್’ನಿಂದ ಮನೆ ಕೊಡುಗೆ

Update: 2017-06-02 18:02 GMT

ಪುತ್ತೂರು, ಜೂ. 2: ಅಸಹಾಯಕ ಸ್ಥಿತಿಯಲ್ಲಿ ಜೋಪಡಿಯೊಂದರಲ್ಲಿ ಬದುಕು ಸಾಗಿಸುತ್ತಿದ್ದ ಬಡ ಕುಟುಂಬವೊಂದಕ್ಕೆ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಜನಸೇವಾ ಕೇಂದ್ರದ ವತಿಯಿಂದ ನೂತನ ಮನೆಯನ್ನು ನಿರ್ಮಿಸಿ ಕೊಟ್ಟಿದ್ದು, ಶುಕ್ರವಾರ ನೂತನ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ನೈತಾಡಿ ಎಂಬಲ್ಲಿನ ಅಚ್ಚುತ ಪೂಜಾರಿ ಮತ್ತು ಅವರ ಪುತ್ರ ಸತೀಶ್ ಪೂಜಾರಿ ಇಬ್ಬರು ಪಾಶ್ವವಾಯು ಪೀಡಿತರಾಗಿದ್ದು, 6 ಮಂದಿಯನ್ನೊಳಗೊಂಡ ಈ ಕುಟುಂಬ ಸಿಮೆಂಟ್ ಶೀಟಿನ ಜೋಪಡಿಯೊಂದರಲ್ಲಿ ವಾಸವಾಗಿತ್ತು. ಶೋಚನೀಯ ಸ್ಥಿತಿಯಲ್ಲಿದ್ದ ಈ ಕುಟುಂಬದ ಸಮಸ್ಯೆಯನ್ನು ಅರ್ಥೈಸಿಕೊಂಡ ಅಶೋಕ್ ಕುಮಾರ್ ರೈ ಅವರು ಮನೆಯನ್ನು ನಿರ್ಮಿಸಿಕೊಟ್ಟರು.

 ಅಚ್ಚುತ ಪೂಜಾರಿ ಅವರು 4 ವರ್ಷಗಳ ಹಿಂದೆ ಕುಸಿದು ಬಿದ್ದು ನರ ದೌರ್ಬಲ್ಯಕ್ಕೊಳಗಾಗಿ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ನಡುವೆ ಲಾರಿ ಚಾಲಕನಾಗಿ ದುಡಿಯುತ್ತಿದ್ದ ಹಿರಿಯ ಪುತ್ರ ಸತೀಶ್ ಪೂಜಾರಿ ಇದ್ದಕ್ಕಿದ್ದಂತೆ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಗೆ ದೇಹದ ಸ್ಥಿಮಿತ ಕಳಕೊಂಡಿದ್ದರು. ಇವರಿಬ್ಬರ ಅನಾರೋಗ್ಯದ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಈ ಕುಟುಂಬ ಮೊಟ್ಟೆತ್ತಡ್ಕದಲ್ಲಿದ್ದ 5ಸೆಂಟ್ಸ್ ಜಾಗ ಮತ್ತು ಮನೆಯನ್ನು ಮಾರಾಟ ಮಾಡಿ ನೈತಾಡಿಗೆ ಬಂದು ಯಾವುದೇ ಮೂಲ ಸೌಕರ್ಯಗಳಿಲ್ಲದ ಸಿಮೆಂಟ್ ಶೀಟ್‌ನ ಜೋಪಡಿಯಲ್ಲಿ ನೆಲೆಸಿತ್ತು.

ಅಚ್ಚುತ ಪೂಜಾರಿ ಅವರ ಕಿರಿಯ ಪುತ್ರ ದಿನೇಶ್ ರಿಕ್ಷಾ ಚಾಲಕನಾಗಿ ಮತ್ತು ಸತೀಶ್ ಪೂಜಾರಿ ಅವರ ಪತ್ನಿ ಕವಿತಾ ಮುಂಡೂರು ಗ್ರಾಮ ಪಂಚಾಯತ್‌ನ ಗ್ರಂಥ ಪಾಲಕಿಯಾಗಿ ದುಡಿದು ಸಂಪಾದಿಸುತ್ತಿದ್ದ ಆದಾಯ ಹಾಗೂ ಅಚ್ಚುತ ಪೂಜಾರಿ ಹಾಗೂ ಅವರ ಪುತ್ರ ಸತೀಶ್ ಪೂಜಾರಿ ಅವರಿಗೆ ಸರ್ಕಾರದಿಂದ ಸಿಗುತ್ತಿದ್ದ ಅಂಗವಿಕಲ ವೇತನ ಬಿಟ್ಟರೆ ಬೇರಾವುದೇ ಆರ್ಥಿಕ ಮೂಲಗಳಿಲ್ಲದ ಕಾರಣ ಹೊಸ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೆ ಇದ್ದ ಜೋಪಡಿಯಲ್ಲೇ ಕಾಲ ಕಳೆಯುವಂತಾಗಿತ್ತು.

ಅಚ್ಚುತ ಪೂಜಾರಿ ಅವರ ಪತ್ನಿ ಮತ್ತು ಸತೀಶ್ ಪೂಜಾರಿ ಅವರ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಮಗು ಸೇರಿದಂತೆ ಒಟ್ಟು ಆರು ಮಂದಿ ಈ ಸಣ್ಣ ಜೋಪಡಿಯಲ್ಲಿ ಬದುಕುತ್ತಿದ್ದರು.

ಪುತ್ತೂರು ನಗರಸಭೆಯ ಸದಸ್ಯ ರಮೇಶ್ ರೈ ಅವರು ಅಚ್ಚುತ ಪೂಜಾರಿ ಅವರ ಕುಟುಂಬದ ಶೋಚನೀಯ ಸ್ಥಿತಿಯನ್ನು ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದಿದ್ದರು. ಅದಕ್ಕೆ ಸ್ಪಂದಿಸಿದ ಅಶೋಕ್‌ ಕುಮಾರ್ ರೈ ಅವರು ಆ ಮನೆಯನ್ನು ದುರಸ್ಥಿಗೊಳಿಸುವ ಮೂಲಕ ನವೀಕರಿಸಿ ಆ ಕುಟುಂಬಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ಮನೆಯ ಉದ್ಘಾಟನೆಯನ್ನು ಶುಕ್ರವಾರ ಸಾಂಕೇತಿಕವಾಗಿ ನಡೆಸಲಾಯಿತು.

ವಿದ್ಯಾಭ್ಯಾಸಕ್ಕೆ ಸಹಾಯ-ವಿದ್ಯುತ್ ಸೌಲಭ್ಯ
 ಮನೆ ಉದ್ಘಾಟನೆಯ ವೇಳೆ ಮಾತನಾಡಿದ ಅಶೋಕ್‌ ಕುಮಾರ್ ರೈ ಎಷ್ಟೋ ಮಂದಿ ಬಡವರ ಸ್ಥಿತಿ ಶೋಚನಿಯ ವಾಗಿದೆ. ಸರ್ಕಾರಿ ಸೌಲಭ್ಯಗಳು ಸರಿಯಾಗಿ ಬಡವರ ಬಳಿಗೆ ತಲುಪುತ್ತಿಲ್ಲ. ನಾನು ಅಚ್ಚುತ ಪೂಜಾರಿ ಅವರ ಮನೆಗೆ ಮೊದಲ ಬಾರಿಗೆ ಬಂದು ಅವರು ವಾಸ್ತವ್ಯವಿದ್ದ ಎದ್ದು ನಿಲ್ಲಲೂ ಸ್ಥಳಾವಕಾಶವಿಲ್ಲದಿದ್ದ ಐದಾರು ಅಡಿ ಎತ್ತರದ ಸಿಮೆಂಟ್ ಶೀಟಿನ ಜೋಪಡಿಯನ್ನು ಕಂಡಾಗ ಮನ ಕರಗಿತು. ಈ ಕುಟುಂಬದ ಕಷ್ಟವನ್ನು ಅರಿತುಕೊಂಡು ಸುಮಾರು ರೂ.2 ಲಕ್ಷ ವೆಚ್ಚದಲ್ಲಿ ಆ ಜೋಪಡಿಯನ್ನು ಪ್ರಾಥಮಿಕ ಸೌಲಭ್ಯಗಳಿರುವ ಮನೆಯಾಗಿ ನವೀಕರಿಸಿ ನೀಡಲಾಗಿದೆ. ಮುಂದೆ ಟ್ರಸ್ಟ್ ವತಿಯಿಂದ ಮನೆಗೆ ವಿದ್ಯುತ್ ಸೌಲಭ್ಯ ಮಾಡಿ ಕೊಡಲಾಗುವುದು. ಸತೀಶ್ ಪೂಜಾರಿ ಅವರ ಪುತ್ರನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲಾಗುವುದು ಎಂದು ತಿಳಿಸಿದರು.
 

ಟ್ರಸ್ಟ್ ವತಿಯಿಂದ ಈಗಾಗಲೇ ಬಡವರಿಗೆ 6 ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, ರೂ.12 ಲಕ್ಷ ವೆಚ್ಚವಾಗಿದೆ. ಇನ್ನಷ್ಟು ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
 

ಆರ್ಯಾಪು ಗ್ರಾಮ ಪಂ. ಸದಸ್ಯ ರಮೇಶ್ ರೈ ಡಿಂಬ್ರಿ ಅವರು ಮಾತನಾಡಿ ಸಮಾಜದಲ್ಲಿ ಬಹಳಷ್ಟು ಮಂದಿ ಶ್ರೀಮಂತರಿದ್ದಾರೆ. ಆದರೆ ಅಶೋಕ್ ಕುಮಾರ್ ರೈ ಅವರಂತೆ ಬಡವರ ಕಣ್ಣಿರು ಒರೆಸುವ ಶ್ರೀಮಂತರು ವಿರಳ ಎಂದರು. ಅಚ್ಚುತ ಪೂಜಾರಿ ಅವರ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ತಾನು ಟ್ರಸ್ಟಿನ ಮೂಲಕ ಅವರಿಗೆ ನೀಡುವುದಾಗಿ ತಿಳಿಸಿದರು.

ಅನಿಸಿಕೆ ವ್ಯಕ್ತಪಡಿಸಿದ ಸತೀಶ್ ಪೂಜಾರಿ ಅವರು ನಮ್ಮ ಬದುಕು ತೀರ ಶೋಚನಿಯ ಸ್ಥಿತಿಯಲ್ಲಿತ್ತು, ಸರ್ಕಾರದ ಯಾವುದೇ ಸೌಲಭ್ಯಗಳು ನಮಗೆ ಸಿಗುತ್ತಿರಲಿಲ್ಲ, ಔಷದ ವೆಚ್ಚ ಬರಿಸುವುದೇ ನಮಗೆ ಕಷ್ಟಕರವಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಬಾಳಿನ ಬೆಳಕಾಗಿ ಬಂದ ಅಶೋಕ್ ರೈ ಅವರು ನಿಜವಾಗಿ ನಮ್ಮ ಪಾಲಿಗೆ ದೇವತಾ ಮನುಷ್ಯ ಎಂದರು.
 
ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ರೇಖನಾಥ ರೈ, ಟ್ರಸ್ಟ್‌ನ ಮೆನೇಜರ್ ಆದರ್ಶ ರೈ ಉಪ್ಪಿನಂಗಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News