7ನೇ ವೇತನ ಆಯೋಗ ಭತ್ತೆಗಳ ಬಗ್ಗೆ ಮುಂದಿನ ವಾರ ನಿರ್ಧಾರದ ಸಾಧ್ಯತೆ
ಹೊಸದಿಲ್ಲಿ,ಜೂ.3: ಸರಕಾರವು ಮನೆ ಬಾಡಿಗೆ ಭತ್ತೆ (ಎಚ್‌ಆರ್‌ಎ) ಸೇರಿದಂತೆ 7ನೇ ವೇತನ ಆಯೋಗವು ಸೂಚಿಸಿರುವ ಭತ್ತೆಗಳ ಕುರಿತಂತೆ ಮುಂದಿನ ವಾರ ನಿರ್ಧಾರ ವೊಂದನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ನೌಕರರ ಯೂನಿಯನ್‌ನ ನಾಯಕ ರೋರ್ವರು ತಿಳಿಸಿದ್ದಾರೆ. ಸರಕಾರದ ಪರಿಗಣನೆಗೆ ಒಪ್ಪಿಸಬೇಕಾದ ಪ್ರಸ್ತಾವಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ 7ನೇ ವೇತನ ಆಯೋಗವು ಶಿಫಾರಸು ಮಾಡಿರುವ ಭತ್ತೆಗಳ ಕುರಿತು ವರದಿಯನ್ನು ಪರಾಮರ್ಶಿಸಲು ವಿತ್ತ ಕಾರ್ಯದರ್ಶಿ ಅಶೋಕ ಲವಾಸಾ ನೇತೃತ್ವದ ಕಾರ್ಯದರ್ಶಿಗಳ ಅಧಿಕಾರಯುತ ಸಮಿತಿಯು ಜೂ.1ರಂದು ಸಭೆ ಸೇರಿತ್ತು ಎಂದೂ ಅವರು ಹೇಳಿದರು.
ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿದ್ದ ಲವಾಸಾ ಸಮಿತಿಯು ಎ.27ರಂದು ತನ್ನ ವರದಿಯನ್ನು ವಿತ್ತಸಚಿವರಿಗೆ ಸಲ್ಲಿಸಿತ್ತು.
ಎಲ್ಲ ನೌಕರರಿಗೂ ಸಾರ್ವತ್ರಿಕವಾಗಿ ಅನ್ವಯಗೊಳ್ಳುವ ಕೆಲವು ಭತ್ತೆಗಳು ಮತ್ತು ನಿರ್ದಿಷ್ಟ ನೌಕರ ವರ್ಗಗಳಿಗೆ ಅನ್ವಯಿಸುವ ಇತರ ಕೆಲವು ಭತ್ತೆಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಲವಾಸಾ ಸಮಿತಿಯು ಸಲಹೆ ನೀಡಿದೆ ಎಂದು ವಿತ್ತ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ನಗರದ ಮಾದರಿಯನ್ನು ಆಧರಿಸಿ ಹೊಸ ಮೂಲ ವೇತನದ ಶೇ.24, ಶೇ.16 ಮತ್ತು ಶೇ.8ರ ದರಗಳಲ್ಲಿ ಎಚ್‌ಆರ್‌ಎ ಪಾವತಿಗೆ 7ನೇ ವೇತನ ಆಯೋಗವು ಶಿಫಾರಸು ಮಾಡಿತ್ತು. ತುಟ್ಟಿಭತ್ತೆಯು ಶೇ.50ನ್ನು ಮೀರಿದಾಗ ಎಚ್‌ಆರ್‌ಎ ದರಗಳನ್ನು ಶೇ.27, ಶೇ.18 ಮತ್ತು ಶೇ.9ಕ್ಕೆ ಹಾಗೂ ತುಟ್ಟಿಭತ್ತೆಯು ಶೇ.100ನ್ನು ಮೀರಿದಾಗ ಶೇ.30, ಶೇ.20 ಮತ್ತು ಶೇ.10ಕ್ಕೆ ಪರಿಷ್ಕರಿಸಬೇಕು ಎಂದೂ ಆಯೋಗವು ಶಿಫಾರಸು ಮಾಡಿತ್ತು. ಭತ್ತೆಗಳಿಗೆ ಸಂಬಂಧಿಸಿದಂತೆ ನೌಕರರ ಯೂನಿಯನ್‌ಗಳು ಶೇ.30, ಶೇ.20 ಮತ್ತು ಶೇ.10ರ ದರಗಳಲ್ಲಿ ಎಚ್‌ಆರ್‌ಎಗೆ ಆಗ್ರಹಿಸಿವೆ.
ಒಟ್ಟು 196 ಭತ್ತೆಗಳ ಪೈಕಿ 52ನ್ನು ತೆಗೆದು ಹಾಕಬೇಕು ಮತ್ತು 36 ಭತ್ತೆಗಳನ್ನು ಇತರ ಭತ್ತೆಗಳೊಂದಿಗೆ ವಿಲೀನಗೊಳಿಸುವ ಮೂಲಕ ಅವುಗಳ ಪ್ರತ್ಯೇಕ ಶೀರ್ಷಿಕೆಗಳನ್ನು ರದ್ದುಗೊಳಿಸಬೇಕು ಎಂದು ಆಯೋಗವು ಶಿಫಾರಸು ಮಾಡಿತ್ತು.
ಸಂಪುಟವು ಈ ಹಿಂದೆ ಉನ್ನತ ಮಟ್ಟದ ಸಮಿತಿಯೊಂದರ ಶಿಫಾರಸುಗಳನ್ನು ಆಧರಿಸಿ 2016ಕ್ಕೆ ಮೊದಲಿನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರ ಪಿಂಚಣಿಯ ಪರಿಷ್ಕರಣೆಯ ಪದ್ಧತಿಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದ ಶಿಫಾರಸುಗಳ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಇದರಿಂದ 55 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ವಾಗಲಿದೆ.