×
Ad

ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ರಾಜ್ಯಗಳ ಸಮ್ಮತಿ

Update: 2017-06-03 18:43 IST

ಹೊಸದಿಲ್ಲಿ, ಜೂ.3: ಇತ್ಯರ್ಥವಾಗದೆ ಉಳಿದಿದ್ದ ಕೆಲವು ನಿಯಮಗಳ ಕುರಿತು ರಾಜ್ಯಗಳು ಸಹಮತ ಸೂಚಿಸುವುದರೊಂದಿಗೆ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರುವುದು ನಿಶ್ಚಿತವಾಗಿದೆ.

 ಸಭೆಯಲ್ಲಿ ನಿಯಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮಾರ್ಪಾಟು ಉಪಬಂಧ ಮತ್ತು ಪ್ರತಿಫಲ ನಿಯಮದ ಕುರಿತು ಜಿಎಸ್‌ಟಿ ಸಮಿತಿ ಸ್ಪಷ್ಟಪಡಿಸಿದ ಬಳಿಕ ಎಲ್ಲಾ ರಾಜ್ಯಗಳೂ ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಸಮ್ಮತಿಸಿವೆ ಎಂದು ಕೇರಳ ವಿತ್ತಸಚಿವ ಥೋಮಸ್ ಇಸಾಕ್ ಹೊಸದಿಲ್ಲಿಯಲ್ಲಿ ನಡೆದ ಜಿಎಸ್‌ಟಿ ಸಮಿತಿ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ವಿತ್ತ ಸಚಿವ ಅರುಣ್ ಜೇಟ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಜಿಎಸ್‌ಟಿಯನ್ನು ಈಗಿರುವ ರೂಪದಲ್ಲಿ ಪ.ಬಂಗಾಲದಲ್ಲಿ ಜಾರಿಗೊಳಿಸಲಾಗದು ಎಂದು ಪ.ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಯ ಹಿನ್ನೆಲೆಯಲ್ಲಿ ಇಸಾಕ್ ಹೇಳಿಕೆಗೆ ಮಹತ್ವವಿದೆ. ಶನಿವಾರ ನಡೆದ ಸಭೆಯಲ್ಲಿ ಪ.ಬಂಗಾಲದ ವಿತ್ತ ಸಚಿವ ಅಮಿತ್ ಮಿತ್ರ ಹಾಜರಿದ್ದುದು ಗಮನಾರ್ಹವಾಗಿದೆ.

  ಜಿಎಸ್‌ಟಿಯನ್ನು ಈಗಿರುವ ರೂಪದಲ್ಲಿ ಒಪ್ಪಲಾಗದು. ಇದು ಎಲ್ಲಾ ಕ್ಷೇತ್ರಗಳಿಗೂ , ವಿಶೇಷವಾಗಿ ಅಸಂಘಟಿತ ಕ್ಷೇತ್ರಕ್ಕೆ ಸರಿಹೊಂದದು. ಇದನ್ನು ಕೇಂದ್ರ ಸರಕಾರ ಸರಿಪಡಿಸಬೇಕು. ಕೆಲವು ಉತ್ಪನ್ನಗಳಿಗೆ ತೆರಿಗೆ ದರವನ್ನು ಕಡಿಮೆಗೊಳಿಸಬೇಕು ಎಂಬ ನಮ್ಮ ಹೋರಾಟ ಮುಂದುವರಿಯಲಿದೆ . ತೆರಿಗೆ ದರ ಇಳಿಯದಿದ್ದರೆ ರಾಜ್ಯದ ಅರ್ಥವ್ಯವಸ್ಥೆ ಮತ್ತು ಉದ್ಯೋಗ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮಮತಾ ಆತಂಕ ವ್ಯಕ್ತಪಡಿಸಿದ್ದರು.

 ಪರಿಗಣಿತ ಸಾಲದ ಷರತ್ತಿನಲ್ಲಿ ತುಸು ರಿಯಾಯ್ತಿ ನೀಡಬೇಕೆಂದು ಕೈಗಾರಿಕಾ ವಲಯದಿಂದ ಒತ್ತಾಯ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News