ಮಹಾರಾಷ್ಟ್ರದಲ್ಲಿ ಮುಗಿದ ರೈತರ ಮುಷ್ಕರ : ಮುಂಬೈನಲ್ಲಿ ಇಳಿಯದ ತರಕಾರಿಗಳ ದರ

Update: 2017-06-03 13:20 GMT

ಮುಂಬೈ,ಜೂ.3: ಮಹಾರಾಷ್ಟ್ರದಲ್ಲಿ ರೈತರ ಮುಷ್ಕರವೇನೋ ಅಂತ್ಯಗೊಂಡಿದೆ. ಆದರೆ ಅಗತ್ಯ ಸರಕುಗಳ ತೀವ್ರ ಕೊರತೆ ಮುಂಬಯಿಗರನ್ನು ಇನ್ನೂ ಕಾಡುತ್ತಿದೆ, ಜೊತೆಗೆ ತರಕಾರಿಗಳ ದುಬಾರಿ ದರಗಳೂ ಇಳಿದಿಲ್ಲ. ಶುಕ್ರವಾರ ಮುಂಬೈನ ಚಿಲ್ಲರೆ ಮಾರುಕಟ್ಟೆ ಗಳಲ್ಲಿ ಕಾಲಿಫ್ಲವರ್ ಬೆಲೆ ಕೆಜಿಗೆ 60 ರೂ.ನಿಂದ 80 ರೂ.ಗೆ ಜಿಗಿದಿದ್ದರೆ,ಟೊಮೆಟೊ 60 ರೂ.ನಿಂದ ಬರೋಬ್ಬರಿ 100 ರೂ.ಗೆ ತಲುಪಿದೆ. ಶನಿವಾರವೂ ಈ ದರಗಳು ಜಪ್ಪಯ್ಯೆ ಎಂದರೂ ಕೆಳಗಿಳಿದಿಲ್ಲ.

ಎಪಿಎಂಸಿ ಮಾರುಕಟ್ಟೆಗಳು ಶನಿವಾರ ತರಕಾರಿಗಳನ್ನು ಪೂರೈಸಿಲ್ಲ. ನಾವೇ ದುಬಾರಿ ಬೆಲೆಗಳನ್ನು ತೆತ್ತು ಬೇರೆ ಕಡೆಗಳಿಂದ ಖರೀದಿಸಿ ತಂದಿದ್ದೇವೆ ಎಂದು ನೈಗಾಂವ್‌ನಲ್ಲಿ ತರಕಾರಿ ಮಾರಾಟಗಾರ ಅಣ್ಣಾ ಜಾಮದಾರ್ ತಿಳಿಸಿದ.

 ಇಂದು ಮಾರುಕಟ್ಟೆಗೆ ಅಗತ್ಯ ಸರಕುಗಳು ತುಂಬಿದ ಕೆಲವೇ ಲಾರಿಗಳು ಬಂದಿವೆ. ಇನ್ನಷ್ಟು ಲಾರಿಗಳಿಗಾಗಿ ನಾವು ಕಾಯುತ್ತಿದ್ದೇವೆ. ಸೋಮವಾರದ ವೇಳೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಎಪಿಎಂಸಿ ಮಾರುಕಟ್ಟೆಗಳಲ್ಲಿಯ ಸಗಟು ವರ್ತಕರು ಹೇಳಿದರು.

ಆದರೆ ಬೆಲೆಗಳು ಇಳಿಯುವವರೆಗೆ ತರಕಾರಿಗಳನ್ನು ಖರೀದಿಸಲು ಮುಂಬಯಿಗರು ಮನಸ್ಸು ಮಾಡುತ್ತಿಲ್ಲ. ಇಷ್ಟೊಂದು ದುಬಾರಿ ಬೆಲೆಗಳನ್ನು ತೆತ್ತು ತರಕಾರಿಗಳನ್ನು ಖರೀದಿಸುವುದರಲ್ಲಿ ಅರ್ಥವಿಲ್ಲ. ಮುಷ್ಕರ ಅಂತ್ಯಗೊಂಡಿರುವುದರಿಂದ ಬೆಲೆಗಳು ಶೀಘ್ರವೇ ಇಳಿಯಬಹುದು ಎಂದು ಕಾಲಾಚೌಕಿಯ ನಿವಾಸಿ ಸುಜಾತಾ ಧೊಯ್ಫುಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News