ಗುರುಪೀಠವು ಬಂಟ ಸಮುದಾಯಕ್ಕೆ ಮಾಡುವ ಮಹಾದ್ರೋಹ: ಏರ್ಯ ಲಕ್ಷ್ಮಿ ನಾರಾಯಣ ಆಳ್ವ

Update: 2017-06-03 14:40 GMT

ಉಡುಪಿ, ಜೂ.3: ಬಂಟರ ಗುರುಪೀಠ ಎಂಬುದು ಬಂಟ ಸಮುದಾಯಕ್ಕೆ ಮಾತ್ರವಲ್ಲದೆ ಅಳಿಯಕಟ್ಟು ಪರಂಪರೆಯ ತುಳುವರು ಹಾಗೂ ಕನ್ನಡಿಗರಿಗೆ ಮಾಡುವ ಮಹಾದ್ರೋಹವಾಗಿದೆ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವ ಬಂಟರ ಯಾನೆ ನಾಡವರ ಜನಜಾಗೃತಿ ಬಳಗದ ವತಿಯಿಂದ ಶನಿವಾರ ಬ್ರಹ್ಮಾವರ ಬಂಟರ ಭವನದಲ್ಲಿ ಆಯೋಜಿಸಲಾದ ಸಾಮಾಜಿಕ ಚಿಂತಕರ ಮೇಲಿನ ಸುಳ್ಳು ದೂರಿನ ವಿರುದ್ಧ ಪ್ರತಿಭಟನೆ ಮತ್ತು ಅಳಿಯಕಟ್ಟು ಪರಂಪರೆ ಧಾರ್ಮಿಕ ನಡಾವಳಿಯನ್ನೇ ಬುಡಮೇಲು ಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ಜನಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಗುರುಪೀಠ ಇಲ್ಲದ ಸಾಕಷ್ಟು ಜಾತಿಗಳಿವೆ. ಗುರುಪೀಠ ನಮಗೆ ಅಗತ್ಯ ಇಲ್ಲ. ಈ ಗುರುಪೀಠವು ನಮ್ಮ ಸಮುದಾಯದ ಹಿತಕ್ಕಾಗಿ ಅಲ್ಲ. ಇದು ಸ್ವಹಿತಕ್ಕಾಗಿ ಮಾಡಿರುವ ಪೀಠವಾಗಿದೆ. ಆದುದರಿಂದ ಇದರ ವಿರುದ್ಧ ಹೋರಾಟ ಮಾಡ ಬೇಕಾಗಿದೆ ಎಂದು ಅವರು ತಿಳಿಸಿದರು.

ಆರೂರು ನಾರಾಯಣ ಶೆಟ್ಟಿ ಮಾತನಾಡಿ, ನನ್ನ ವಿರುದ್ಧ ಸಂತೋಷ್ ಸ್ವಾಮೀಜಿ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ. ನಾನು ಧರ್ಮಸ್ಥಳ ಮಂಜುನಾಥನ ಆಣೆ ಹಾಕಿ ಹೇಳುತ್ತೇನೆ. ನಾನು ಯಾವುದೇ ಕೊಲೆಗೆ ಯತ್ನಿಸಿಲ್ಲ. ನಾನು ಅಂತಹ ಕೆಲಸ ಮಾಡಿದ್ದರೆ ಸ್ವಾಮೀಜಿ ಮಂಜುನಾಥನ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ ಮಾತನಾಡಿ, ಸಮುದಾಯದ ಪ್ರಮುಖರ ವಿರುದ್ಧ ಸ್ವಾಮೀಜಿ ದಾಖಲಿಸಿರುವ ಸುಳ್ಳು ದೂರುಗಳನ್ನು ಕೂಡಲೇ ಹಿಂಪಡೆಯಬೇಕು. ನಾವು ನಮ್ಮ ಸಮುದಾಯದಲ್ಲಿರುವ ಹಿಂದುಳಿದ ಕುಟುಂಬ ಗಳನ್ನು ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬೆಳ್ವೆ ವಸಂತ ಶೆಟ್ಟಿ, ವಸಂತ ಗಿಳಿಯೂರು ಮೊದಲಾದವರು ಮಾತನಾಡಿದರು.

ಚಂದ್ರಶೇಖರ್ ಹೆಗ್ಡೆ ನಿರ್ಣಯ ಮಂಡಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸರ್ವಾನುಮತದ ನಿರ್ಣಯ ಮಂಡನೆ 2012ರಲ್ಲಿ ತೀರ್ಥಹಳ್ಳಿಯಲ್ಲಿ ಪೀಠಾರೋಹಣ ಮಾಡಿದ್ದ ಸಂತೋಷ್ ಸ್ವಾಮೀಜಿ ಹೆಚ್ಚಿನ ಲಾಭಕ್ಕಾಗಿ ಬಾರಕೂರಿನಲ್ಲಿ ಮತ್ತೊಂದು ಪೀಠ ಸ್ಥಾಪಿಸಿ ಬಂಟರ ಗುರು ಎಂಬುದಾಗಿ ಬಿಂಬಿಸುತ್ತಿರುವುದನ್ನು ಖಂಡಿಸುತ್ತೇವೆ.

ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಿರುವ ಸಂತೋಷ್ ಸ್ವಾಮೀಜಿಯ ಬೆಂಗಾವಲು ಪಡೆಯನ್ನು ಹಿಂಪಡೆಯಬೇಕು. ಬಾರಕೂರು ಮಹಾ ಸಂಸ್ಥಾನಕ್ಕೆ ಸರಕಾರ ನೀಡಿರುವ ಅನುದಾನವನ್ನು ಕೂಡಲೇ ಹಿಂಪಡೆಯಬೇಕು ಮತ್ತು ಮುಂದೆ ಎಂದಿಗೂ ಅನುದಾನ ಒದಗಿಸಬಾರದು.

ಪುರಾತತ್ವ ಇಲಾಖೆ ಅನುಮತಿ ಪಡೆಯದೆ ಬಾರಕೂರಿನಲ್ಲಿ ಉತ್ಖನನ ನಡೆಸಿ ಐತಿಹಾಸಿಕ ದಾಖಲೆ ಹಾಗೂ ಸಾಕ್ಷಗಳನ್ನು ನಾಶ ಪಡಿಸಿರುವ ಬಗ್ಗೆ ಇಲಾಖೆ ತನಿಖೆ ನಡೆಸಬೇಕು. ಬಂಟ ಸಮುದಾಯದ ಪ್ರಮುಖರ ಮೇಲೆ ಹೂಡಿರುವ ಸುಳ್ಳು ದೂರಿನ ಕುರಿತು ಪೊಲೀಸರು ಸರಿಯಾಗಿ ತನಿಖೆ ನಡೆಸಿ ಶೀಘ್ರ ವರದಿ ನೀಡಬೇಕು.

ಬಂಟ ಸಮುದಾಯದ ಮಧ್ಯೆ ಸಂಘರ್ಷ ಉಂಟು ಮಾಡುತ್ತಿ ರುವ ಸಂತೋಷ್ ಸ್ವಾಮೀಜಿ ವಿರುದ್ಧ ನಿರಂತರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News