×
Ad

ಗೋಮಾಂಸ ದೇಶದ ಶೇ. 75 ಜನರ ಆಹಾರದ ಹಕ್ಕು: ಶಾಫಿ ಸಅದಿ

Update: 2017-06-03 20:31 IST

ಮಂಗಳೂರು, ಜೂ. 3: ದೇಶದ ಶೇ. 75ರಷ್ಟು ಜನರು ಗೋಮಾಂಸ ಸೇವಿಸುವವರಾಗಿದ್ದು, ಸಂವಿಧಾನಾತ್ಮಕವಾಗಿರುವ ಜನರ ಆಹಾರ ಪದ್ಧತಿಯನ್ನು ನಿಯಂತ್ರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಬೆಂಗಳೂರಿನ ಸಅದಿಯಾ ಎಜುಕೇಶನಲ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶಾಫಿ ಸಅದಿ ಹೇಳಿದ್ದಾರೆ.

ಎಸೆಸೆಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರು ಶನಿವಾರ ನಡೆದ ಕೇಂದ್ರ ಸರಕಾರದ ಗೋಹತ್ಯೆ ನಿಷೇಧ ಕಾನೂನು ವಿರುದ್ಧದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ಜನರು ಏನು ತಿನ್ನಬೇಕು ಮತ್ತು ಏನನ್ನು ಉಡಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಈ ವಿಷಯದಲ್ಲಿ ಅವರು ಸ್ವತಂತ್ರರಾಗಿದ್ದಾರೆ. ದೇಶದಲ್ಲಿ ಮುಸ್ಲಿಮರು ಮಾತ್ರ ಗೋಮಾಂಸವನ್ನು ಸೇವಿಸುತ್ತಾರೆ ಎಂಬುದು ತಪ್ಪು. ಗೋಮಾಂಸವು ದೇಶದ ಶೇ. 75 ಜನರ ಆಹಾರವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶದ ಕೇವಲ ಒಂದು ವರ್ಗದ ಜನರ ಸಂತೃಪ್ತಿಗಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ ಎಂದರು.

ದಲಿತ ಮುಖಂಡ ಶೇಖರ ಎಲ್. ಮಾತನಾಡಿ, ಗೋವು ದೇವತೆ ಹೌದೋ ಅಲ್ವೋ ಗೊತ್ತಿಲ್ಲ. ಆದರೆ ಅದು ನನ್ನ ಆಹಾರವಾಗಿದೆ. ದಲಿತರು ಶತಮಾನಗಳಿಂದ ಗೋಮಾಂಸ ಬಕ್ಷಣೆ ಮಾಡಿಕೊಂಡು ಬರುತ್ತಿದ್ದಾರೆ. ದೇಶದಲ್ಲಿ ಅಧಿಕಾರ ಅನುಭವಿಸಲು ಮಾತ್ರ ಸಂವಿಧಾನ ಅನಿವಾರ್ಯ ಆಗಬಾರದು. ಜನರ ಆಹಾರ ಪದ್ಧತಿಯ ರಕ್ಷಣೆಯಲ್ಲೂ ಸಂವಿಧಾನದ ಪಾಲನೆಯಾಗಬೇಕು ಎಂದರು.

ದೇಶದ ಜನರ ಆಹಾರ ಹಕ್ಕಿನ ಮೇಲೆ ನಿಷೇಧ ಹೇರಲು ಹೊರಟಿರುವ ಕೇಂದ್ರ ಸರಕಾರಕ್ಕೆ ವಿದೇಶಗಳಿಗೆ ರಫ್ತಾಗುವ ಸುಮಾರು 30,000 ಕೋಟಿ ಟನ್ ಗೋಮಾಂಸದ ಮೇಲೆ ಯಾಕೆ ನಿಷೇಧ ಹೇರಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ನಮ್ಮ ದೇವತೆ ಎಂದು ಹೇಳಿಕೊಳ್ಳುವವರು ಮುಸ್ಲಿಮರ ಹೆಸರಿನಲ್ಲಿ ದೇವತೆಗಳನ್ನು ಕಡಿದು ವಿದೇಶಗಳಿಗೆ ರಫ್ತು ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದರು.

ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ, ಭಾರತ ದೇಶವು ಯಾವುದೇ ಒಂದು ವರ್ಗದ ಜನರಿಗೆ ಸೇರಿದ್ದಲ್ಲ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವು ದೇಶದ ಒಂದು ವರ್ಗದ ಜನರ ಹಿತಾಸಕ್ತಿಗಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಹೊರಟಿದಂತಿದೆ. ಇಡೀ ದೇಶದಲ್ಲಿ ಗೋಹತ್ಯೆ ನಿಷೇಧ ಜಾರಿಗೊಳಿಸುವ ಮುನ್ನ ಬಿಜೆಪಿಯವರು ತಮ್ಮ ಮನೆ ಸ್ವಚ್ಛಗೊಳಿಸಲು ಗಮನ ಹರಿಸಲಿ ಎಂದರು.

ಹರಿಯಾಣದ ಮುಖ್ಯಮಂತ್ರಿ ತಾನು ಬೀಫ್ ತಿನ್ನುತ್ತೇನೆ. ಆದ್ದರಿಂದ ನನ್ನ ರಾಜ್ಯದಲ್ಲಿ ಅದನ್ನು ನಿಷೇಧ ಮಾಡುವುದಿಲ್ಲ ಎಂದು ಹೇಳಿದ್ದಾರೆ. ವಿದೇಶಗಳಿಗೆ ಬೀಫ್ ರಫ್ತು ಮಾಡುವವರಲ್ಲಿ ಬಿಜೆಪಿಯ ಮುಖಂಡರೇ ಪ್ರಮುಖರಾಗಿದ್ದಾರೆ. ಇದರ ಬಗ್ಗೆ ಮಾತು ಎತ್ತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಕೇವಲ ಮುಸ್ಲಿಮರನ್ನು ಗುರಿಯಾಗಿಸಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಹೊರಟಿದೆ ಎಂದು ಆರೋಪಿಸಿದರು.

ಎಸೆಸೆಫ್ ದ.ಕ. ಜಿಲ್ಲಾ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್‌ನ ರಾಜ್ಯ ಕಾರ್ಯದರ್ಶಿ ಡಿ.ಕೆ. ಉಮರ್ ಸಖಾಫಿ, ಎಸ್‌ಇಡಿಸಿ ಅಧ್ಯಕ್ಷ ಕೆ.ಕೆ.ಎಂ. ಕಾಮಿಲ್ ಸಖಾಫಿ, ಎಸ್‌ಜೆಎಂನ ಸುಲೈಮಾನ್ ಸಖಾಫಿ, ಹಾಫಿಝ್ ಯಾಕೂಬ್ ಸಅದಿ ನಾವೂರು, ಕಾರ್ಪೊರೇಟರ್ ಲತೀಫ್ ಕಂದಕ್, ಎಸ್‌ಎಂಎ ಇದರ ಖತ್ತರ್ ಬಾವ ಹಾಜಿ, ಎಸ್‌ವೈಎಸ್‌ನ ಅಶ್ರಫ್ ಕಿನಾರ, ಮುಷ್ತಾಕ್ ಅಹ್ಮದ್, ಇಶಾರ ಪಾಕ್ಷಿಕ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಅಬ್ದುಲಂ ಹಮೀದ್ ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಯ ಬಳಿಕ ಮುಸ್ಲಿಮರ ನಿಯೋಗವು ದ.ಕ. ಜಿಲ್ಲಾಧಿಕಾರಿಯ ಮೂಲಕ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News