ರೈಲ್ವೆ ಹಳಿ ದಾಟುವಾಗ ನಿಯಮ ಪಾಲನೆ ಅಗತ್ಯ: ವಿ.ವಿ.ಶೆಟ್ಟಿ

Update: 2017-06-03 16:07 GMT

ಉಡುಪಿ, ಜೂ.3: ರೈಲ್ವೆ ಹಳಿ ದಾಟುವುದು ಮತ್ತು ಅವಘಡ ಸಂಭವಿಸ ದಂತೆ ಎಚ್ಚರ ವಹಿಸುವುದು ರೈಲ್ವೆ ಇಲಾಖೆಯ ಮುಖ್ಯ ಜವಾಬ್ದಾರಿಯಾಗಿದೆ. ಇಂದು ರೈಲ್ವೆ ಹಳಿ ದಾಟುವಾಗ ಯಾವುದೇ ಸುರಕ್ಷತಾ ಕ್ರಮ ಪಾಲಿಸದ ಪರಿಣಾಮ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಮತ್ತು ಶಾಶ್ವತ ಅಂಗ ವಿಕಲರಾಗುತ್ತಿದ್ದಾರೆ.

ಈ ನಿಟ್ಟಿನಲ್ಲಿ ಸಾರ್ವಜನಿಕರು ರೈಲ್ವೆಯೊಂದಿಗೆ ಸಹಕರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಕೊಂಕಣ ರೈಲ್ವೆ ತರಬೇತಿ ವಿಭಾಗದ ಹಿರಿಯ ಪ್ರಬಂಧಕ ವಿ.ವಿ.ಶೆಟ್ಟಿ ಹೇಳಿದ್ದಾರೆ.

ಕೊಂಕಣ ರೈಲ್ವೆ ಕಾರ್ಪೊರೇಶನ್ ವತಿಯಿಂದ ರೈಲು ಹಳಿ ಕ್ರಾಸಿಂಗ್ ಜಾಗೃತ ಸಪ್ತಾಹದ ಅಂಗವಾಗಿ ಕುಂಜಿಬೆಟ್ಟು ಟಿ.ಎ.ಪೈ ಇಎಂಎಚ್‌ಎಸ್ ಶಾಲೆ ಯಲ್ಲಿ ಶನಿವಾರ ಆಯೋಜಿಸಲಾದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡು ತಿದ್ದರು.

ಭಾರತಾದ್ಯಂತ 64 ಸಾವಿರ ಕಿ.ಮೀ. ಉದ್ದದ ರೈಲ್ವೆ ಹಳಿ ಇದೆ. ಇದನ್ನು ಎಲ್ಲೆಂದರಲ್ಲಿ ದಾಟುವುದು ಶಿಕ್ಷರ್ಹಾ ಅಪರಾಧ. ರೈಲ್ವೆ ಹಳಿ ದಾಟುವುದಕ್ಕಾಗಿ ರೈಲ್ವೆ ಸೇತುವೆ ಹಾಗೂ ಅಂಡರ್ ಪಾಸ್‌ಗಳನ್ನು ನಿರ್ಮಿಸಲಾಗಿದೆ. ಇದು ಎರಡೂ ಅಗತ್ಯ ಇಲ್ಲದ ಕಡೆಗಳಲ್ಲಿ ಕ್ರಾಸಿಂಗ್‌ಗಾಗಿ ಗೇಟ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚು ವಾಹನ ಸಂಚಾರ ಇರದ ಕ್ರಾಸಿಂಗ್‌ನಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡುವುದಿಲ್ಲ. ಅಂತಹ ಕಡೆ ಜನರ ಅಲ್ಲಿ ಅಳವಡಿಸಲಾದ ಫಲಕ ಗಳನ್ನು ಗಮನಿಸಿ ಕ್ರಾಸಿಂಗ್ ಮಾಡಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದ ಪರಿಣಾಮ ಅವಘಡಗಳು ಸಂಭವಿಸುತ್ತಿರುತ್ತವೆ ಎಂದರು.

ನಿಯಮಗಳನ್ನು ಪಾಲಿಸದೆ ಕ್ರಾಸಿಂಗ್ ಮಾಡುವ ವೇಳೆ ಸಂಭವಿಸುವ ಅಪಘಾತಗಳಿಗೆ ರೈಲ್ವೆ ಇಲಾಖೆ ಜವಾಬ್ದಾರ ಆಗಲ್ಲ. ಯಾವುದೇ ಫಲಕಗಳು ಇಲ್ಲದೆ ಜನ ಗಮನಿಸದೆ ಸಂಭವಿಸುವ ಅಪಘಾತಗಳಿಗೆ ಇಲಾಖೆ ಸಂಪೂರ್ಣ ಜವಾಬ್ದಾರ ಆಗಿರುತ್ತದೆ ಎಂದು ಅವರು ಹೇಳಿದರು.

ರೈಲ್ವೆ ಹಳಿಯಲ್ಲಿ ಕಿವಿಗೆ ಫೋನ್ ಇಟ್ಟು ಹಾಡು ಕೇಳುತ್ತ ಹೋಗುವ ಸಂಪ್ರದಾಯ ಈಗ ಹೆಚ್ಚಾಗುತ್ತಿದೆ. ಇದರಿಂದ ಇತ್ತೀಚೆಗೆ ನಾಲ್ಕು ಜನ ರೈಲಿ ನಡಿಗೆ ಬಿದ್ದು ಮೃತಪಟ್ಟಿದ್ದಾರೆ. ಆದುದರಿಂದ ರೈಲ್ವೆ ಹಳಿಯಲ್ಲಿ ಸಂಚರಿಸುವಾಗ ಹಾಗೂ ದಾಟುವಾಗ ಅತ್ಯಂತ ಜಾಗರೂಕತೆಯಿಂದ ಇರಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೊಂಕಣ ರೈಲ್ವೆಯ ಹಿರಿಯ ಸಂಚಾರ ಪ್ರಬಂಧಕ ವಿನಯ ಕುಮಾರ್, ಸುರಕ್ಷತಾ ವಿಭಾಗದ ಹಿರಿಯ ನಿರ್ವಾಹಕ ಪ್ರಬಂಧಕ ದಿಲೀಪ್ ಭಟ್, ಹಿರಿಯ ಮೇಲ್ವಿಚಾರಕ ನಾಗಪತಿ ಹೆಗ್ಡೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News