×
Ad

ಲಭಿಸದ ಆ್ಯಂಬುಲೆನ್ಸ್ ಸೌಲಭ್ಯ: ಪತ್ನಿಯ ಮೃತದೇಹವನ್ನು ಬೈಕ್ ನಲ್ಲಿ ಸಾಗಿಸಿದ ಪತಿ

Update: 2017-06-03 21:38 IST

ಬಿಹಾರ, ಜೂ.3: ಸರಕಾರಿ ಆಸ್ಪತ್ರೆಯಲ್ಲಿ ವ್ಯಾನ್ ಲಭಿಸದ ಹಾಗೂ ಖಾಸಗಿ ಆ್ಯಂಬುಲೆನ್ಸ್ ತರಿಸಲು ಹಣವಿಲ್ಲದೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವವನ್ನು ಬೈಕ್ ನಲ್ಲಿ ಸಾಗಿಸಿದ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರಾಣಿಬರಿ ಗ್ರಾಮದ ಶಂಕರ್ ಸಾಹರ ಪತ್ನಿ ಸುಶೀಲಾ ದೇವಿ ಅನಾರೋಗ್ಯದಿಂದ ಪುರ್ನಿಯಾ ಸಾದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

“ಪತ್ನಿ ಮೃತಪಟ್ಟ ನಂತರ ಆಕೆಯ ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ನನ್ನ ಗ್ರಾಮಕ್ಕೆ ಒಯ್ಯಲು ಆಸ್ಪತ್ರೆಯ ಸಿಬ್ಬಂದಿಯಲ್ಲಿ ವಾಹನ ಒದಸಗಿಸುವಂತೆ ಕೇಳಿದ್ದೆ. ಆದರೆ ಇದಕ್ಕೊಪ್ಪದ ಅವರು ನಾನೇ ವಾಹನದ ವ್ಯವಸ್ಥೆ ಮಾಡುವಂತೆ ಹೇಳಿದರು. ನಂತರ ಆ್ಯಂಬುಲೆನ್ಸ್ ಚಾಲಕನೋರ್ವನನ್ನು ಸಂಪರ್ಕಿಸಿದ್ದು, ಆತ 2,500 ರೂ, ಬಾಡಿಗೆ ನೀಡುವಂತೆ ಹೇಳಿದ್ದ. ಆದರೆ ಅಷ್ಟೊಂದು ಹಣ  ನನ್ನಲ್ಲಿರಲಿಲ್ಲ. ಬೇರೆ ದಾರಿ ಕಾಣದೆ ಪುತ್ರ ಪಪ್ಪು ಸಹಾಯದೊಂದಿಗೆ ಆಕೆಯ ಮೃತದೇಹವನ್ನು ಬೈಕ್ ನಲ್ಲಿ ಇಟ್ಟು ಗ್ರಾಮಕ್ಕೆ ಸಾಗಿಸಿದೆವು” ಎಂದು ಸಾಹ ಹೇಳಿದ್ದಾರೆ.

ಸಾಹ ಹಾಗೂ ಅವರ ಪುತ್ರ ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ಪಂಜಾಬ್ ನಲ್ಲಿ ಕೆಲಸ ಮಾಡುತ್ತಿದ್ದರು. ಸುಶೀಲಾ ದೇವಿ ಅನಾರೋಗ್ಯದಿಂದಿರುವ ಮಾಹಿತಿ ಲಭಿಸಿದ ತಕ್ಷಣ ಅವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದರು.

ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ಸಿವಿಲ್ ಸರ್ಜನ್ ಎಂ.ಎಂ.ವಾಸಿಮ್ ಪ್ರತಿಕ್ರಿಯಿಸಿದ್ದು, “ಆಸ್ಪತ್ರೆಯಲ್ಲಿ ಶವವನ್ನು ಸಾಗಿಸುವ ವಾಹನ ಸೌಲಭ್ಯವಿಲ್ಲ. ಇದ್ದ ಒಂದು ವಾಹನ ಸರಿಯಿಲ್ಲ. ಆದ್ದರಿಂದ ಸಂಬಂಧಪಟ್ಟವರೇ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News