ಬೆಳ್ತಂಗಡಿ ನ್ಯಾಯಾಲಯಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಭೇಟಿ

Update: 2017-06-03 16:35 GMT

ಬೆಳ್ತಂಗಡಿ, ಜೂ.3: ಮನುಷ್ಯನಿಗೆ ನಿವೃತ್ತಿ ಎಂಬುದಿಲ್ಲ. ಸಾಧ್ಯವುದ್ದಷ್ಟು ಸಮಯ ಜನರ ಸೇವೆ ಮಾಡಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ, ದ.ಕ. ಆಡಳಿತಾತ್ಮಕ ವ್ಯವಹಾರಗಳ ನ್ಯಾಯಾಧೀಶ ಎ. ಎನ್. ವೇಣು ಗೋಪಾಲ ಗೌಡ ಹೇಳಿದರು.

ಅವರು ಶನಿವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಧಿಕೃತ ಭೇಟಿ ನೀಡಿ ವಕೀಲರ ಸಂಘದ ವತಿಯಿಂದ ನಡೆದ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಬೆಳ್ತಂಗಡಿಗೆ ನೂತನ ನ್ಯಾಯಾಲಯ ಕಟ್ಟಡ ರಚನೆ ಸಂದರ್ಭ ಹೈಕೋರ್ಟಿನಿಂದ ಕಡತಗಳ ವಿಲೇವಾರಿ ಆಗಿದ್ದು ವಿಧಾನ ಸೌಧದಲ್ಲಿ ಬಾಕಿಯಾಗಿದೆ. ಈ ಬಜೆಟ್‌ನಲ್ಲಿ ನೂತನ ಕಟ್ಟಡಗಳಿಗೆ ಅನುದಾನ ನೀಡಿಲ್ಲ. ಮುಂದಿನ ಬಜೆಟ್‌ನಲ್ಲಿ ಮಂಜೂರು ಮಾಡುವಂತೆ ಜನಪ್ರತಿನಿಧಿಗಳಿಗೆ ವಕೀಲರು ಮನವಿ ಮಾಡಿ ಎಂದು ಸಲಹೆ ನೀಡಿದರು.

ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ. ಎಸ್. ಬಿಳಗಿ ಮಾತನಾಡಿ, ಬೆಳೆಯುವ ಸಿರಿಗೆ ಮೊಳಕೆಯಲ್ಲಿಯೇ ನೀರು ಗೊಬ್ಬರ ಹಾಕಿದರೆ ಅದು ಹೆಮ್ಮರವಾಗಿ ಫಲನೀಡುತ್ತದೆ. ನಮಗಿರುವ ನೌಕರಿ ನೆಪ ಮಾತ್ರ. ದೊರೆತ ಅವಕಾಶದಲ್ಲಿ ಜನರ ಸೇವೆ ಮಾಡುಉದು ಮುಖ್ಯ. ನ್ಯಾಯಾಧೀಶ ಎಷ್ಟೇ ಎತ್ತರದಲ್ಲಿ ಕುಳಿತಿದ್ದರೂ ವಕೀಲರು ತಲೆ ಎತ್ತಿ ವಾದ ಮಂಡಿಸುವಾಗ ನ್ಯಾಯಾಧೀಶ ತಲೆ ತಗ್ಗಿಸಿಯೇ ಕೇಳಬೇಕು. ಆದ್ದರಿಂದ ಎತ್ತರಕ್ಕೆ ಏರಿದ್ದೇವೆ ಎಂಬ ಅಹಂಕಾರ ಯಾರಿಗೂ ಇರಬಾರದು ಎಂದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಕೋಮಲಾ, ನ್ಯಾಯಾಧೀಶ ಸತೀಶ್ ಎಸ್.ಜಿ., ಹೆಚ್ಚುವರಿ ನ್ಯಾಯಾಧೀಶ ಆನಂದ್ ಬಿ.ಕೆ. ಉಪಸ್ಥಿತರಿದ್ದರು.

ವಕೀಲರ ಸಂಘದ ಕಾರ್ಯದರ್ಶಿ ಶಿವಯ್ಯ ಎಸ್.ಎಲ್. ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಸ್ವಾಗತಿಸಿ, ನ್ಯಾಯವಾದಿ ಹರಿಣಿ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷ ವಸಂತ ಗೌಡ ಮರಕಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News