ಮಣಿಪಾಲದ ಸಂಸ್ಥೆಗೆ ಕೋಟ್ಯಂತರ ರೂ. ವಂಚನೆ
ಮಣಿಪಾಲ, ಜೂ.3: ಉತ್ತಮ ಗುಣಮಟ್ಟದ ಕಬ್ಬಿಣದ ಅದಿರು ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಕಡಿಮೆ ಗುಣಮಟ್ಟದ ಅದಿರು ಸರಬರಾಜು ಮಾಡುವ ಮೂಲಕ ಮಣಿಪಾಲದ ಸಂಸ್ಥೆಯೊಂದಕ್ಕೆ ಕೋಟ್ಯಂತರ ರೂ. ವಂಚನೆ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಹನುಮಾನ್ ಮಿನರಲ್ಸ್ ಮತ್ತು ಫೋನಿಕ್ಸ್ ಇಂಟರ್‌ನ್ಯಾಶನಲ್ ಎಂಬ ಸಂಸ್ಥೆಗಳ ಪ್ರತಿನಿಧಿ ಮತ್ತು ಮಧ್ಯವರ್ತಿ ಸಂಸ್ಥೆಯಾದ ಸಿನೋ ಪೊಡರ್ ಟ್ರೇಡ್ ಲಿ. ಸಂಸ್ಥೆಯ ಪ್ರತಿನಿಧಿಯವರು 2011ರ ನ.7ರಂದು ಉಡುಪಿ ಉಪ್ಪೂರು ಜಾತಬೆಟ್ಟುವಿನ ಸತೀಶ್ ರಾವ್ ಎಂಬವರ ಮಣಿಪಾಲದಲ್ಲಿರುವ ಸಂಸ್ಥೆಯ ಮುಖ್ಯ ಕಛೇರಿಗೆ ಬಂದು ಹಾಂಕಾಂಗ್ ದೇವಿ ರಿಸೋರ್ಸಸ್ ಸಂಸ್ಥೆಗೆ 40,000 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಗೋವಾದ ಮೈನಾ ಜಟ್ಟಿಯಿಂದ ಕಳುಹಿ ಸುವ ಬಗ್ಗೆ ಮಾತುಕತೆ ನಡೆಸಿದ್ದರು. ಅದರಂತೆ ಈ ಆರೋಪಿತ ಮೂರು ಸಂಸ್ಥೆಯವರು ನೀಡುವ 40,000 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ದೇವಿ ರಿಸೋರ್ಸಸ್ ಸಂಸ್ಥೆಗೆ ಕಳುಹಿಸುವ ಬಗ್ಗೆ ಸತೀಶ್ ರಾವ್ರ ಸಂಸ್ಥೆ ಹಾಗೂ ದೇವಿ ರಿಸೋರ್ಸಸ್ ಸಂಸ್ಥೆ 2011ರ ಡಿ.2ರಂದು ಕರಾರು ಒಪ್ಪಂದ ಮಾಡಿಕೊಂಡಿತ್ತು. ಹಾಗೆ 2012ರ ಜ.18 ರಂದು ಸತೀಶ್ ರಾವ್‌ರ ಸಂಸ್ಥೆಗೆ ಶೇ.50 ಎಫ್‌ಇ ಗುಣಮಟ್ಟದ ಕಬ್ಬಿಣದ ಅದಿರನ್ನು ಸರಬರಾಜು ಮಾಡುವ ಬಗ್ಗೆ ಆರೋಪಿತ ಮೂರು ಸಂಸ್ಥೆಯೊಂದಿಗೆ ಕರಾರು ಒಪ್ಪಂದ ಮಾಡಲಾಗಿತ್ತು.
ಕರಾರು ಒಪ್ಪಂದದಂತೆ ಆರೋಪಿತ ಮೂರು ಸಂಸ್ಥೆಯವರು ಸತೀಶ್ ರಾವ್ ರ ಸಂಸ್ದೆಗೆ ಶೇ.50 ಎಫ್‌ಇ ಗುಣಮಟ್ಟದ ಕಬ್ಬಣದ ಅದಿರನ್ನು ಸರಬರಾಜು ಮಾಡದೆ ಶೇ.43.9 ಎಫ್‌ಇ ಗುಣಮಟ್ಟದ ಕಬ್ಬಿಣದ ಅದಿರನ್ನು ಸರಬರಾಜು ಮಾಡಿದ್ದು, ಇದರಿಂದ ಸತೀಶ್ ರಾವ್‌ರ ಸಂಸ್ಥೆಗೆ ಒಟ್ಟು 9,20,00,000ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.