ಸಿಬಿಎಸ್ ಇ: 90 ಶೇ. ಅಂಗವೈಕಲ್ಯದ ಪ್ರತಿಭೆಗೆ 88 ಶೇ. ಅಂಕ
ಪಶ್ಚಿಮ ಬಂಗಾಳ, ಜೂ.3: ಹುಟ್ಟಿನಿಂದಲೇ ಮಾರಕ ಸಮಸ್ಯೆಗೆ ತುತ್ತಾಗಿ, ಕೈ-ಕಾಲುಗಳ ಶಕ್ತಿಯನ್ನು ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಬಾಯಿಯಲ್ಲೇ ಪೆನ್ ಕಚ್ಚಿಕೊಂಡು ಪರೀಕ್ಷೆ ಬರೆದು ಸಿಬಿಎಸ್ ಇ 10 ತರಗತಿ ಪರೀಕ್ಷೆಯಲ್ಲಿ 88 ಶೇ. ಅಂಕ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ.
17 ವರ್ಷದ ತುಹಿನ್ ಡೇ ಹುಟ್ಟುತ್ತಲೇ ಆರ್ಥ್ರೋಗ್ರಿಪೋಸಿಸ್ ಮಲ್ಟಿಪ್ಲೆಕ್ಸ್ ಕಾಂಜೆನಿಟಾ (AMC) ಎಂಬ ರೋಗಕ್ಕೆ ತುತ್ತಾಗಿದ್ದರು. ತಾಯಿಯ ಗರ್ಭಧಾರಣೆ ಸಂದರ್ಭದಲ್ಲೇ ಈ ಸಮಸ್ಯೆಗೆ ತುತ್ತಾಗುವ ಮಗು ಕೈ-ಕಾಲುಗಳ ಚಟುವಟಿಕೆಯನ್ನೇ ಕಳೆದುಕೊಳ್ಳುತ್ತದೆ,
ಖರಗ್ಪುರ ಐಐಟಿಯ ಸೆಂಟ್ರಲ್ ಸ್ಕೂಲ್ ನಿಂದ ಪರೀಕ್ಷೆ ಬರೆದಿದ್ದ ತುಹಿನ್ , ಪರೀಕ್ಷೆಯ ಸಿದ್ಧತೆಗಾಗಿ ಕೋಟಾ ಗೆ ತೆರಳಿದ್ದರು. ಫಲಿತಾಂಶದ ಬಗ್ಗೆ ಶಾಲೆಯ ಆಡಳಿತ ಮಾಹಿತಿ ನೀಡಿದ್ದು, ವಿಷಯವಾರು ಫಲಿತಾಂಶಗಳು ಲಭಿಸಿಲ್ಲ ಎಂದು ತುಹಿನ್ ಎ ತಾಯಿ ಸುಜಾತಾ ಡೇ ಹೇಳಿದ್ದಾರೆ.
“ದೈಹಿಕ ಸಮಸ್ಯೆಯಿಂದಾಗಿ ಕೆಲ ಚಟುವಟಿಕೆಗಳಲ್ಲಿ ತುಹಿನ್ ಪಾಲ್ಗೊಳ್ಳದ ಕಾರಣ ಶಾಲೆ ಬಿ2 ಗ್ರೇಡ್ ಎಂದು ಬೋರ್ಡ್ ಗೆ ಕಳುಹಿಸಿದೆ. ಆದ್ದರಿಂದ ಒಟ್ಟು ಫಲಿತಾಂಶದಲ್ಲಿ ಕುಸಿತವಾಗಿದೆ. 9 ನೆ ತರಗತಿಯವರೆಗೆ ತುಹಿನ್ 90 ಶೇ,ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದು, ಈ ಬಾರಿ 95 ಶೇ. ಅಂಕ ಗಳಿಸುವ ನಿರೀಕ್ಷೆಯಿತ್ತು ಎನ್ನುತ್ತಾರೆ ಸುಜಾತಾ.
ಶೇ.90ರಷ್ಟು ಅಂಗವೈಕಲ್ಯತೆ ಹೊಂದಿರುವ ತುಹಿನ್ ರನ್ನು 14 ಕಿ.ಮೀ. ದೂರದ ಶಾಲೆಗೆ ಅವರ ತಂದೆ ಬೈಕ್ ಮೂಲಕ ಕರೆದೊಯ್ಯುತ್ತಿದ್ದರು. ಮತ್ತೋರ್ವ ಬರೆಯುವವರ ಸಹಾಯವಿಲ್ಲದೆ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ನೀಡಲಾಗುವ ಹೆಚ್ಚುವರಿ ಸಮಯಾವಕಾಶವನ್ನು ಬಳಸದೆ ತುಹಿನ್ ಪರೀಕ್ಷೆ ಬರೆದಿದ್ದಾರೆ.
ಅಸಾಧಾರಣ ಸಾಧನೆಗಾಗಿ 2012ರಲ್ಲಿ “ರಾಷ್ಟ್ರೀಯ ಮಕ್ಕಳ ಪ್ರಶಸ್ತಿ” ಹಾಗೂ 2013ರಲ್ಲಿ ಅತ್ಯುತ್ತಮ ಸೃಜನಶೀಲ ಮಕ್ಕಳ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ತುಹಿನ್ ಡೇಯವರಿಗೆ ಪ್ರದಾನಿಸಿದ್ದಾರೆ.