ಅಗತ್ಯ ಬಿದ್ದರೆ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ: ಸಚಿವ ಯು.ಟಿ. ಖಾದರ್
ಮಂಗಳೂರು, ಜೂ.3: ಉಳ್ಳಾಲ ಸಮೀಪದ ಮೊಗವೀರಪಟ್ನದಲ್ಲಿ ಶನಿವಾರ ನಡೆದ ಬಾರ್ಜ್ ದುರಂತದಲ್ಲಿ ಈಗಾಗಲೇ ನಾಲ್ವರನ್ನು ರಕ್ಷಣೆ ಮಾಡಲಾಗಿದ್ದು, ಉಳಿದ 23 ಮಂದಿಯ ರಕ್ಷಣೆಗೆ ಅಗತ್ಯ ಬಿದ್ದಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಈಗಾಗಲೇ ಕೋಸ್ಟ್ ಗಾರ್ಡ್‌ನ ಕಮಾಂಡೆಂಟ್ ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದೇನೆ. ಬಾಜ್‌ನೊಳಗಿರುವ ಉದ್ಯೋಗಿಗಳೂ ಸಂಪರ್ಕದಲ್ಲಿದ್ದಾರೆ. 60 ಕಿ.ಮೀ. ವೇಗದಲ್ಲಿ ಸಮುದ್ರದಲ್ಲಿ ಬೀಸುತ್ತಿರುವ ಬಿರುಸಿನ ಗಾಳಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೋಸ್ಟ್‌ಗಾರ್ಡ್‌ನವರು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಗಾಳಿಯ ವೇಗ ಕಡಿಮೆಯಾದರೆ ಮತ್ತೆ ಕಾರ್ಯಾಚರಣೆ ನಡೆಸುವ ಬಗ್ಗೆ ಕೋಸ್ಟ್‌ಗಾರ್ಡ್‌ನವರು ತಿಳಿಸಿರುವುದಾಗಿ ಖಾದರ್ ಹೇಳಿದರು.
ಬಾರ್ಜ್‌ನೊಳಗೆ ಸಿಲುಕಿಕೊಂಡಿರುವ 23 ಮಂದಿಯ ರಕ್ಷಣೆಗೆ ಅಗತ್ಯ ಬಿದ್ದರೆ ಹೆಲಿಕಾಪ್ಟರ್ ಬಳಸಲಾಗುವುದು. ಈಗಾಗಲೇ ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅವರೊಂದಿಗೆ ಮಾತನಾಡಿದ್ದು, ಗೋವಾ ಮತ್ತು ದೆಹಲಿಯಿಂದ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗಾಗಿ ಸಿದ್ಧಗೊಳಿಸಲಾಗಿದ್ದು, ಅಗತ್ಯಬಿದ್ದರೆ ಉಳ್ಳಾಲಕ್ಕೆ ತರಿಸುವುದಾಗಿ ಅವರು ಮಾಹಿತಿ ನೀಡಿದರು.
ಕೋಸ್ಟ್‌ಗಾರ್ಡ್ ಮತ್ತು ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಬಾರ್ಜ್ ಭಾಗಶಃ ಹಾನಿಗೊಂಡಿದ್ದರೂ ಬಾರ್ಜ್‌ನೊಳಗೆ ನೀರು ನುಗ್ಗಿಲ್ಲ. ಬಾರ್ಜ್ ಮುಳುಗಡೆಯಾಗದು. ಈ ಹಿನ್ನೆಲೆಯಲ್ಲಿ ಬಾರ್ಜ್‌ನೊಳಗಿರುವ ಎಲ್ಲಾ 23 ಮಂದಿಯನ್ನು ರಕ್ಷಿಸುವ ಭರವಸೆಯನ್ನು ನೀಡಿದ್ದಾರೆ. ಏನಿದ್ದರೂ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಖಾದರ್ ತಿಳಿಸಿದ್ದಾರೆ.