‘ಬನಸಿರಿ’ ಅನಾವರಣ ಮೂಲಕ ‘ಭುಹೆ’ಗೆ ಅಭಿನಂದನೆ

Update: 2017-06-03 18:13 GMT

ಮಂಗಳೂರು, ಜೂ.3: ವೃತ್ತಿಯಿಂದ ನಿವೃತ್ತರಾದ ಹಿರಿಯ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರಿಗೆ ‘ಬನಸಿರಿ’ ಅಭಿನಂದನಾ ಗ್ರಂಥವನ್ನು ಅನಾವರಣಗೊಳಿಸುವ ಮೂಲಕ ಶನಿವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭುವನೇಶ್ವರಿ ಹೆಗಡೆ ಅಭಿನಂದನಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ಅವರ ಪತಿ ಶಂಭು ಹೆಗಡೆ ಮತ್ತು ಪುತ್ರಿ ಆಭಾ ಹೆಗಡೆ ಅವರೂ ಸಾಕ್ಷಿಯಾದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಭುವನೇಶ್ವರಿ ಹೆಗಡೆ ‘ನಗದವರು ಮನುಷ್ಯರೇ ಅಲ್ಲ ಎಂದು ನಂಬಿಕೊಂಡು ಹಾಸ್ಯ ಸಾಹಿತ್ಯವನ್ನು ರಚಿಸಿದ ನನಗೆ ಎಲ್ಲ ವರ್ಗ ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ತನ್ನೂರಿನ ನೆಲ, ಜಲದ ರಸದ ಜೊತೆ ಕಳೆದ ಹಲವು ವರ್ಷಗಳಿಂದ ಮಂಗಳೂರಿನ ವಿಶಿಷ್ಟ ಅನುಭವಗಳು ನನ್ನ ಸಾಹಿತ್ಯ ಕೃಷಿಗೆ ಸಹಕಾರಿಯಾಗಿದೆ. ತಾವೆಲ್ಲ ಪ್ರೀತಿಯಿಂದ ಸತ್ಕರಿಸಿದ ಈ ಕಾರ್ಯಕ್ರಮದಿಂದ ನನ್ನ ಮನಸ್ಸು ತುಂಬಿ ಬಂದಿದೆ ಎಂದರು.
 ಸಾಹಿತಿ ವೈದೇಹಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಪರಂಜಿ ಪತ್ರಿಕೆಯ ಸಂಪಾದಕ ಎಂ. ಶಿವಕುಮಾರ್ ‘ಬನಸಿರಿ’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿದರು. ಲೇಖಕಿ ಚಂದ್ರಕಲಾ ನಂದಾವರ ಮತ್ತು ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಣ ಹಾಗು ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಶುಭ ಹಾರೈಸಿದರು.

ಸಾಹಿತಿ ಹಾಗು ‘ಬನಸಿರಿ’ ಗ್ರಂಥದ ಸಂಪಾದಕ ಎನ್. ರಾಮನಾಥ್ ಮಾತನಾಡಿದರು.

ಅಭಿನಂದನಾ ಸಮಿತಿಯ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಮುರಳಿ ಮೋಹನ್ ಚೂಂತಾರು ವಂದಿಸಿದರು. ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶಕುಂತಳಾ ಕಿಣಿ ಮತ್ತು ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News