×
Ad

ಹೆಚ್ಚುವರಿ 9 ತನಿಖಾಧಿಕಾರಿಗಳ ನೇಮಕ: ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ

Update: 2017-06-03 23:46 IST

ಮಂಗಳೂರು, ಜೂ.3: ಲೋಕಾಯುಕ್ತಕ್ಕೆ ಈವರೆಗೆ ಸುಮಾರು 6 ಸಾವಿರ ದೂರುಗಳು ಬಂದಿದ್ದು, ಲೋಕಾಯುಕ್ತದಲ್ಲಿ ವಿಚಾರಣೆಗೆ ಬಾಕಿ ಇರುವ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು 9 ಮಂದಿ ಹೆಚ್ಚುವರಿ ತನಿಖಾಧಿಕಾರಿಗಳನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ. ನೇಮಕಾತಿ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಡಿ.ವಿಶ್ವನಾಥ ಶೆಟ್ಟಿ ಹೇಳಿದರು.

ಶನಿವಾರ ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ರಾಜ್ಯ ಸರಕಾರವೇ ತನಿಖೆ ನಡೆಸುತ್ತಿದೆ. ಅದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅವಶ್ಯವಾದರೆ ಸ್ವಯಂ ಆಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ನ್ಯಾ. ಡಿ. ವಿಶ್ವನಾಥ ಶೆಟ್ಟಿ ನುಡಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಘಟನೆಯ ಸತ್ಯಾಂಶ ಏನೆಂದು ಗೊತ್ತಾಗಿಲ್ಲ. ಕೇವಲ ಮಾಧ್ಯಮಗಳ ವರದಿಯನ್ನು ನೋಡಿದ್ದೇನೆ. ಸರಕಾರ ಈಗಾಗಲೇ ತನಿಖೆಗೆ ಆದೇಶಿಸಿರುವುದರಿಂದ ಲೋಕಾಯುಕ್ತ ಮಧ್ಯಪ್ರವೇಶದ ಅನಿವಾರ್ಯತೆ ಇಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿ ವೀಲ್‌ಚೇರ್ ಬಂದಿಲ್ಲ ಎಂದು ಪತಿಯನ್ನೇ ಪತ್ನಿ ಎಳೆದುಕೊಂಡು ಹೋಗಿದ್ದಾಗಿ ವರದಿಯಾಗಿದೆ. ವೀಲ್‌ಚೇರ್ ಬಾರದಿದ್ದರೆ ಈ ವಿಚಾರವನ್ನು ವೈದ್ಯರ ಗಮನಕ್ಕೆ ತರಬಹುದಿತ್ತು. ಅದು ಬಿಟ್ಟು ಸಿಬ್ಬಂದಿ ಮಾಡುವ ಲೋಪಕ್ಕೆ ವೈದ್ಯರು ತಪ್ಪು ಮಾಡಿದ್ದಾರೆ ಎಂಬರ್ಥದಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದರು.

ರಾಜ್ಯದ 15 ಜಿಲ್ಲೆಗಳನ್ನು ಪ್ರವಾಸ ಮಾಡಿದ್ದೇನೆ. ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದ ಆಗು ಹೋಗುಗಳನ್ನು ಪರಿಶೀಲಿಸುತ್ತೇನೆ. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳ ಸ್ಥಿತಿಗತಿಗಳನ್ನು ಗಮನಿಸುತ್ತಿದ್ದೇನೆ. ಅದರ ಜೊತೆಗೆ ಶಿಕ್ಷಣ ಹಾಗೂ ಸಮಾಜ ಸುಧಾರಣೆಗೆ ಒತ್ತು ನೀಡುತ್ತೇನೆ ಎಂದರು.

ಮುಖಮಂತ್ರಿ ವಿರುದ್ಧ 43 ಪ್ರಕರಣಗಳು ಲೋಕಾಯುಕ್ತದಲ್ಲಿ ಸಲ್ಲಿಕೆಯಾಗಿದೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪಗಳಿಗೂ ಮುಖ್ಯಮಂತ್ರಿಯನ್ನು ಹೊಣೆಗಾರರನ್ನಾಗಿ ಮಾಡಿ ದೂರು ನೀಡುತ್ತಿದ್ದಾರೆ. ಕಾರ್ಯದರ್ಶಿಗಳ ಕರ್ತವ್ಯ ಲೋಪಕ್ಕೆ ಮುಖ್ಯಮಂತ್ರಿಯನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಅದಕ್ಕಿಂತ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆಯನ್ನು ನೀಡುತ್ತೇನೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News