ಪ್ರತಿಕೂಲ ವಾತಾವರಣ ಬಾರ್ಜ್ ಅವಘಡಕ್ಕೆ ಕಾರಣ: ಪ್ರಶಾಂತ್ ಶರ್ಮಾ
Update: 2017-06-04 13:28 IST
ಮಂಗಳೂರು, ಜೂ.4: ಸಮುದ್ರದಲ್ಲಿ ಅಲೆಗಳ ಅಬ್ಬರ ಮತ್ತು ಪ್ರತಿಕೂಲ ವಾತಾವರಣದಿಂದ ಬಾರ್ಜ್ ಬಂಡೆ ಕಲ್ಲಿಗೆ ಢಿಕ್ಕಿ ಹೊಡೆದು ವಾಲಿಕೊಂಡಿತ್ತು. ಇದರಿಂದಾಗಿ ಬಾರ್ಜ್ ಆ್ಯಂಕರ್‌ನ ನಾಲ್ಕು ತಂತಿಗಳ ಪೈಕಿ ಒಂದು ತುಂಡಾಗಿದ್ದರಿಂದ ನಿರ್ವಹಣೆ ಸಾಧ್ಯವಾಗಲಿಲ್ಲ ಎಂದು ಬಾರ್ಜ್‌ನಲ್ಲಿ ಎಂಜಿನಿಯರ್ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿರುವ ಹಿಮಾಚಲ ಪ್ರದೇಶದ ಪ್ರಶಾಂತ್ ಶರ್ಮಾ ತಿಳಿಸಿದ್ದಾರೆ. "ಕಡಲ್ಕೊರೆತ ಕಾಮಗಾರಿಗೆಂದು ಬಾರ್ಜ್ ಮೂರು ತಿಂಗಳ ಹಿಂದೆ ಉಳ್ಳಾಲಕ್ಕೆ ಬಂದಿತ್ತು. ಮುಂಬೈ ಮೂಲದವರ ಈ ಬಾರ್ಜ್‌ನಲ್ಲಿ ಮೂರು ತಿಂಗಳುಗಳಿಂದ ನನ್ನ ಸಹಿತ ಒಟ್ಟು 27 ಮಂದಿ ಕೆಲಸ ಮಾಡುತ್ತಿದ್ದಾರೆ. ರಾಜಸ್ಥಾನ, ಉತ್ತರ ಪ್ರದೇಶ, ಹರ್ಯಾಣ ಮತ್ತು ಕರ್ನಾಟಕದವರು ಬಾರ್ಜ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ನಾಲ್ಕು ಮಂದಿಯನ್ನು ರಕ್ಷಿಸಲಾಗಿತ್ತು. ಆದರೆ, ಉಳಿದ 23 ಮಂದಿ ಇಡೀ ರಾತ್ರಿ ಬಾರ್ಜ್‌ನಲ್ಲಿ ಕಳೆದಿದ್ದೇವೆ" ಎಂದರು. ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ಅವಘಡ: ಬಾಂಬೆಯವರಿಗೆ ಸೇರಿದ್ದೆ ಎನ್ನಲಾದ ಈ ಬಾರ್ಜ್ 3 ತಿಂಗಳುಗಳಿಂದ ಉಳ್ಳಾಲ ಕಡಲ ತೀರದಿಂದ ಸುಮಾರು 200 ಮೀಟರ್ ದೂರದಲ್ಲಿ ಸಮುದ್ರ ಕೊರತೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಸುತ್ತಿತ್ತು. 27 ಮಂದಿ ನೌಕರರು ಇರುವ ಈ ಬಾರ್ಜ್ ಶನಿವಾರ ಸುಮಾರು 3 ಗಂಟೆಗೆ ತಡೆಗೋಡೆಗೆ ಹಾಕಿದ್ದ ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ಭಾಗಶಃ ವಾಲಿಕೊಂಡಿತ್ತು. ಘಟನೆಯಿಂದ ಬಾರ್ಜ್‌ನೊಳಗಿದ್ದ 27 ನೌಕರರು ಅಪಾಯದಲ್ಲಿ ಸಿಲುಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೋಸ್ಟ್‌ಗಾರ್ಡ್‌ನವರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ರಾತ್ರಿ ಸುಮಾರು 9 ಗಂಟೆಯವರೆಗೂ ಕಾರ್ಯಾಚರಣೆ ನಡೆದಿದ್ದು, ಕೇವಲ ನಾಲ್ಕು ಮಂದಿಯನ್ನು ಮಾತ್ರ ರಕ್ಷಿಸಿ ದಡ ಸೇರಿಸಲು ಸಾಧ್ಯವಾಗಿತ್ತು. ತೀವ್ರ ಗಾಳಿ ಹಾಗೂ ಸಮುದ್ರದ ಅಲೆಗಳ ಅಬ್ಬರವು ಕೋಸ್ಟ್ ಗಾರ್ಡ್‌ನವರ ರಕ್ಷಣಾ ಕಾರ್ಯಕ್ಕೆ ತಡೆಯನ್ನುಂಟು ಮಾಡಿತ್ತು. ಮತ್ತೆ ರವಿವಾರ ಮುಂಜಾನೆ ಸಮುದ್ರಕ್ಕಿಳಿದ ಕೋಸ್ಟ್ ಗಾರ್ಡ್‌ನವರು ಮತ್ತೆ 12 ಮಂದಿಯನ್ನು ರಕ್ಷಿಸುವ ಮೂಲಕ ಒಟ್ಟು 16 ಮಂದಿಯನ್ನು ರಕ್ಷಿಸಲಾಗಿತ್ತು. ಬೆಳಗ್ಗೆ 9 ಗಂಟೆಯ ಹೊತ್ತಿಗೆ ಬಾರ್ಜ್‌ನಲ್ಲಿದ್ದ ಎಲ್ಲ 27 ನೌಕರರನ್ನು ರಕ್ಷಿಸುವಲ್ಲಿ ಕೋಸ್ಟ್ ಗಾರ್ಡ್‌ನವರು ಯಶಸ್ವಿಯಾಗಿದ್ದಾರೆ.Full View