ಕಲ್ಲಡ್ಕದಲ್ಲಿ ಯುವಕರಿಗೆ ಚೂರಿ ಇರಿತ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
Update: 2017-06-04 14:48 IST
ಬಂಟ್ವಾಳ, ಜೂ. 4: ಕಲ್ಲಡ್ಕದಲ್ಲಿ ಇತ್ತೀಚೆಗೆ ಯುವಕರಿಬ್ಬರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಚಿ ನಿವಾಸಿ ಸ್ವಾಗತ್ ಹಾಗೂ ಗೋಳ್ತಮಜಲು ಸಮೀಪದ ಕೃಷ್ಣಕೋಡಿ ನಿವಾಸಿ ಸಂದೇಶ್ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ಘಟನೆಯಲ್ಲಿ ನೇರವಾಗಿ ಭಾಗಿಯಾಗದೆ, ಚೂರಿ ಇರಿದ ಆರೋಪಿಗಳಿಗೆ ವಿವಿಧ ರೀತಿಯಲ್ಲಿ ಸಹಕರಿಸಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚೂರಿ ಇರಿದ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ. ಮೇ 26ರಂದು ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಇಬ್ಬರು ಯುವಕರಿಗೆ ಕಾರಿನಲ್ಲಿ ಬಂದ ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾಗಿತ್ತು. ಘಟನೆಯ ಬಳಿಕ ಕಲ್ಲಡ್ಕದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೇ 27ರಿಂದ ಬಂಟ್ವಾಳ ತಾಲೂಕಿನಾದ್ಯಂತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಜೂನ್ 9ರವರೆಗೆ ಮುಂದುವರಿಸಲಾಗಿದೆ.